ಜ್ಯೂ. ಎನ್​ಟಿಆರ್​ ಬರ್ತ್​ಡೇ ದಿನವೇ ‘ಆರ್​ಆರ್​ಆರ್’ ಚಿತ್ರದ ಒಟಿಟಿ ಪ್ರೀಮಿಯರ್​; ಇಲ್ಲಿದೆ ಹೊಸ ಟ್ರೇಲರ್​

ಜ್ಯೂ. ಎನ್​ಟಿಆರ್​ ಬರ್ತ್​ಡೇ ದಿನವೇ ‘ಆರ್​ಆರ್​ಆರ್’ ಚಿತ್ರದ ಒಟಿಟಿ ಪ್ರೀಮಿಯರ್​; ಇಲ್ಲಿದೆ ಹೊಸ ಟ್ರೇಲರ್​
ಆರ್​ಆರ್​ಆರ್​ ವರ್ಲ್ಡ್​ ಒಟಿಟಿ ಪ್ರೀಮಿಯರ್

RRR Movie OTT Premiere: ಮೇ 20ರಂದು ‘ಆರ್​ಆರ್​ಆರ್​’ ಚಿತ್ರದ ವರ್ಲ್ಡ್​ ಪ್ರೀಮಿಯರ್ ಮಾಡಲಾಗುತ್ತಿದೆ. ಆ ಮೂಲಕ ಜ್ಯೂ. ಎನ್​ಟಿಆರ್​ ಜನ್ಮದಿನಕ್ಕೆ ಭರ್ಜರಿ ಗಿಫ್ಟ್​ ಸಿಗಲಿದೆ.

TV9kannada Web Team

| Edited By: Madan Kumar

May 13, 2022 | 3:12 PM

ಖ್ಯಾತ ನಿರ್ದೇಶಕ ರಾಜಮೌಳಿ ಅವರ ಬತ್ತಳಿಕೆಯಿಂದ ಬಂದ ‘ಆರ್​ಆರ್​ಆರ್​’ ಸಿನಿಮಾ (RRR Movie) ಮಾಡಿದ ಮೋಡಿ ಅಷ್ಟಿಷ್ಟಲ್ಲ. ಸಿನಿಮಾ ಲೋಕದಲ್ಲಿ ಅವರೊಬ್ಬ ಮಾಂತ್ರಿಕ ಎಂಬುದು ಈ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಯಿತು. ವಿಶ್ವಾದ್ಯಂತ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿರುವುದು ‘ಆರ್​ಆರ್​ಆರ್’ ಸಿನಿಮಾದ ಹೆಚ್ಚುಗಾರಿಕೆ ಈಗ ಈ ಚಿತ್ರ ಒಟಿಟಿ ಪ್ಲಾಟ್​ಫಾರ್ಮ್​ಗೆ ಕಾಲಿಡುತ್ತಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಬಳಿಕ ಈಗ ಮನೆಮನೆಗಳಲ್ಲೂ ಮನರಂಜನೆ ನೀಡಲು ಈ ಸಿನಿಮಾ ಬರುತ್ತಿದೆ. ‘ಆರ್​ಆರ್​ಆರ್​’ ಚಿತ್ರ ಯಾವಾಗ ಒಟಿಟಿಗೆ ಬರಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದರು. ಆ ಕಾಯುವಿಕೆಗೆ ಈಗ ತೆರೆ ಬಿದ್ದಿದೆ. ಮೇ 20ರಂದು ಈ ಚಿತ್ರ ಜೀ5 (Zee5) ಮೂಲಕ ಪ್ರಸಾರ ಆಗಲಿದೆ. ಮೂಲ ತೆಲುಗಿನ ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಿಗೆ ಡಬ್​ ಆಗಿದೆ. ಈ ಎಲ್ಲ ವರ್ಷನ್​ಗಳು ಕೂಡ ಮೇ 20ರಿಂದ ವೀಕ್ಷಣೆಗೆ ಲಭ್ಯವಾಗಲಿವೆ. ವಿಶೇಷ ಎಂದರೆ ಮೇ 20ರಂದು ಜ್ಯೂ. ಎನ್​ಟಿಆರ್​ (Jr NTR) ಬರ್ತ್​ಡೇ. ಆ ದಿನವೇ ‘ಆರ್​ಆರ್​ಆರ್’ ಸಿನಿಮಾದ ವರ್ಲ್ಡ್​ ಪ್ರೀಮಿಯರ್​ ಆಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಆರ್​ಆರ್​ಆರ್​’ ಸಿನಿಮಾದಲ್ಲಿ ಕೊಮರಮ್​ ಭೀಮ್​ ಎಂಬ ಪಾತ್ರದಲ್ಲಿ ಜ್ಯೂ. ಎನ್​ಟಿಆರ್​ ನಟಿಸಿದ್ದಾರೆ. ಅವರ ಜೊತೆ ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನು ರಾಮ್​ ಚರಣ್​ ನಿಭಾಯಿಸಿದ್ದಾರೆ. ಇಬ್ಬರ ಪಾತ್ರಗಳು ಕೂಡ ಈ ಸಿನಿಮಾದಲ್ಲಿ ಸಖತ್​ ಹೈಲೈಟ್​ ಆಗಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದ ರೀತಿ ಕಂಡು ಬಾಲಿವುಡ್​ ಮಂದಿ ಕೂಡ ನಿಬ್ಬೆರಗಾದರು. ಚಿತ್ರಮಂದಿರದಲ್ಲಿ ‘ಆರ್​ಆರ್​ಆರ್’ ಚಿತ್ರವನ್ನು ಮಿಸ್​ ಮಾಡಿಕೊಂಡವರು ಮನೆಯಲ್ಲೇ ಕೂತು ಜೀ5 ಮೂಲಕ ನೋಡಬಹುದು. ಇನ್ನೊಮ್ಮೆ, ಮತ್ತೊಮ್ಮೆ, ಮೊಗದೊಮ್ಮೆ ನೋಡಬೇಕು ಎಂಬ ಹಂಬಲ ಇರುವವರು ಕೂಡ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ನೋಡಿ ಎಂಜಾಯ್​ ಮಾಡಲಿದ್ದಾರೆ.

ಒಟಿಟಿಯಲ್ಲಿ ‘ಆರ್​ಆರ್​ಆರ್​’ ಸಿನಿಮಾ ಪ್ರಸಾರದ ದಿನಾಂಕವನ್ನು ಬಹಿರಂಗ ಪಡಿಸುವ ಸಲುವಾಗಿ ಚಿತ್ರತಂಡ ಹೊಸ ಟ್ರೇಲರ್​ ಹಂಚಿಕೊಂಡಿದೆ. ಈ ಮೊದಲು ರಿಲೀಸ್​ ಆಗಿದ್ದ ಥಿಯೆಟ್ರಿಕಲ್​ ಟ್ರೇಲರ್​ಗಿಂತಲೂ ಈ ಟ್ರೇಲರ್​ ಭಿನ್ನವಾಗಿದೆ. ಹಿನ್ನೆಲೆ ಸಂಗೀತ ಕೂಡ ಸಖತ್​ ಕಿಕ್​ ನೀಡುವಂತಿದೆ. ಚಿತ್ರದ ಅನೇಕ ಅದ್ದೂರಿ ದೃಶ್ಯಗಳನ್ನು ಪೋಣಿಸಿ ಈ ಟ್ರೇಲರ್​ ಸಿದ್ಧಪಡಿಸಲಾಗಿದೆ. ಜೀ5, ಡಿವಿವಿ ಮೂವೀಸ್​ ಹಾಗೂ ಆರ್​ಆರ್​ಆರ್​ ಸಿನಿಮಾದ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಈ ಹೊಸ ಟ್ರೇಲರ್​ ಹಂಚಿಕೊಳ್ಳಲಾಗಿದೆ. ಅದಕ್ಕೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ.

‘ಆರ್​ಆರ್​ಆರ್’ ಸಿನಿಮಾದಲ್ಲಿ ಬಾಲಿವುಡ್​ ನಟ ಅಜಯ್​ ದೇವಗನ್​ ಕೂಡ ಒಂದು ಗಮನಾರ್ಹ ಪಾತ್ರ ಮಾಡಿದ್ದಾರೆ. ನಾಯಕಿಯಾಗಿ ಬಿ-ಟೌನ್​ ಬೆಡಗಿ ಆಲಿಯಾ ಭಟ್​ ನಟಿಸಿದ್ದಾರೆ. ಹಾಗಾಗಿ ಉತ್ತರ ಭಾತರದ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ಹಿಂದಿ ವರ್ಷನ್​ನಿಂದ ಈ ಚಿತ್ರ ಬರೋಬ್ಬರಿ 270 ಕೋಟಿ ರೂಪಾಯಿ ಗಳಿಸಿದೆ. ಒಟಿಟಿಯಲ್ಲೂ ಕೂಡ ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳಲಿದ್ದಾರೆ ಎಂಬ ಭರವಸೆಯೊಂದಿಗೆ ಮೇ 20ರಂದು ವರ್ಲ್ಡ್​ ಪ್ರೀಮಿಯರ್ ಮಾಡಲಾಗುತ್ತಿದೆ. ಆ ಮೂಲಕ ಜ್ಯೂ. ಎನ್​ಟಿಆರ್​ ಜನ್ಮದಿನಕ್ಕೆ ಭರ್ಜರಿ ಗಿಫ್ಟ್​ ನೀಡಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada