ಜೀ5ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಜತೆ ಪ್ರಸಾರಕ್ಕೆ ಸಜ್ಜಾದ ಕನ್ನಡದ ‘ತಲೆದಂಡ’, ‘ಮುಗಿಲ್ ಪೇಟೆ’ ಸಿನಿಮಾಗಳು
Zee5: ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಕನ್ನಡ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಕನ್ನಡ ಡಬ್ಬಿಂಗ್ ವರ್ಷನ್ ಜತೆ ‘ತಲೆದಂಡ’, ‘ಮುಗಿಲ್ ಪೇಟೆ’ ಚಿತ್ರಗಳು ಮೇ 13ರಿಂದ ವೀಕ್ಷಣೆಗೆ ಲಭ್ಯವಾಗುತ್ತಿವೆ.
ಪ್ರತಿ ವೀಕೆಂಡ್ನಲ್ಲಿ ಸಿನಿಮಾ ವೀಕ್ಷಿಸಿದರೆ ಮಸ್ತ್ ಮನರಂಜನೆ ಸಿಗುತ್ತದೆ. ಹಾಗಂತ ಎಲ್ಲಾ ವಾರಾಂತ್ಯದಲ್ಲೂ ಚಿತ್ರಮಂದಿರಕ್ಕೆ ಹೋಗೋದು ಕಷ್ಟ ಆಗಬಹುದು. ಅಂಥವರಿಗೆ ಬೆಸ್ಟ್ ಆಯ್ಕೆ ಎಂದರೆ ಒಟಿಟಿ ಪ್ಲಾಟ್ಫಾರ್ಮ್ (OTT Platform) . ಹೌದು, ಈಗ ಒಟಿಟಿಯಲ್ಲಿ ಹತ್ತು ಹಲವು ಹೊಸ ಹೊಸ ಚಿತ್ರಗಳು ಲಭ್ಯವಾಗುತ್ತಿವೆ. ಕನ್ನಡದ ಸಿನಿಮಾಗಳು ಕೂಡ ಈ ಪ್ಲಾಟ್ಫಾರ್ಮ್ನಲ್ಲಿ ಹೆಚ್ಚುತ್ತಿವೆ. ಜೀ5 ಒಟಿಟಿ ಮೂಲಕ ಈಗಾಗಲೇ ಅನೇಕ ಸಿನಿಮಾಗಳು ವೀಕ್ಷಣೆ ಲಭ್ಯವಾಗಿವೆ. ಈಗ ಇನ್ನೂ ಒಂದಷ್ಟು ಹೊಸ ಚಿತ್ರಗಳು ಸೇರ್ಪಡೆ ಆಗುತ್ತವೆ. ಅದರ ಜೊತೆಗೆ ಕನ್ನಡಕ್ಕೆ ಡಬ್ ಆದ ಪರಭಾಷೆ ಸಿನಿಮಾಗಳು ಕೂಡ ಮನರಂಜನೆ ನೀಡುತ್ತಿವೆ. ಈ ವರ್ಷ ಅತಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಕೂಡ ಪ್ರಮುಖವಾದದ್ದು. ಈಗ ಈ ಚಿತ್ರ ಕನ್ನಡಕ್ಕೆ ಡಬ್ ಆಗಿದ್ದು ಜೀ5 (Zee5) ಮೂಲಕ ಪ್ರಸಾರ ಆಗಲಿದೆ. ಅದರ ಜೊತೆಗೆ ಮನುರಂಜನ್ ರವಿಚಂದ್ರನ್ ನಟನೆಯ ‘ಮುಗಿಲು ಪೇಟೆ’ ಹಾಗೂ ಸಂಚಾರಿ ವಿಜಯ್ ಅಭಿನಯದ ‘ತಲೆದಂಡ’ ಚಿತ್ರ ಕೂಡ ಬಿತ್ತರ ಆಗಲಿದೆ. ಮೇ 13ರಿಂದ ಈ ಮೂರು ಸಿನಿಮಾಗಳು ವೀಕ್ಷಣೆಗೆ ಲಭ್ಯವಾಗಲಿವೆ.
‘ದಿ ಕಾಶ್ಮೀರ್ ಫೈಲ್ಸ್’: ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಡಿಬಂದಿದೆ. ವಿವೇಕ್ ಅಗ್ನಿಹೋತ್ರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ದರ್ಶನ್ ಕುಮಾರ್, ಪಲ್ಲವಿ ಜೋಶಿ, ವಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ, ಅನುಪಮ್ ಖೇರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿರುವ ಈ ಸಿನಿಮಾ ಈಗ ಒಟಿಟಿಗೆ ಲಗ್ಗೆ ಇಡುತ್ತಿದೆ. ಥಿಯೇಟರ್ನಲ್ಲಿ ಬಿಡುಗಡೆ ಆದಾಗ ಇದು ಹಿಂದಿಯಲ್ಲಿ ಮಾತ್ರ ಲಭ್ಯವಾಗಿತ್ತು. ಈಗ ಕನ್ನಡ ಸೇರಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿದೆ. ಜೀ5ನಲ್ಲಿ ಮೇ 13ರಿಂದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕನ್ನಡ ವರ್ಷನ್ ಪ್ರಸಾರ ಆಗಲಿದೆ. ಈ ಚಿತ್ರವನ್ನು ಕನ್ನಡದಲ್ಲಿ ನೋಡಿ ಅರ್ಥ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಪ್ರೇಕ್ಷಕರಿಗೆ ಜೀ5 ಮೂಲಕ ಈ ಅವಕಾಶ ಸಿಗುತ್ತಿದೆ.
ಸಂಚಾರಿ ವಿಜಯ್ ನಟನೆಯ ‘ತಲೆದಂಡ’:
ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗದ ಪಾಲಿಗೆ ದೊಡ್ಡ ನಷ್ಟ. ಅವರು ನಿಧನರಾದ ಬಳಿಕ ‘ತಲೆದಂಡ’ ಚಿತ್ರ ರಿಲೀಸ್ ಆಯಿತು. ವಿಭಿನ್ನವಾದ ಪಾತ್ರದಲ್ಲಿ ವಿಜಯ್ ನಟನೆ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದರು. ಆ ಸಿನಿಮಾ ಕೂಡ ಮೇ 13ರಿಂದ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಆ ಸಿನಿಮಾ ವೀಕ್ಷಿಸುವ ಮೂಲಕ ಸಂಚಾರಿ ವಿಜಯ್ ಅವರಿಗೆ ಪ್ರೇಕ್ಷಕರು ನಮನ ಸಲ್ಲಿಸಲಿದ್ದಾರೆ.
ರವಿಚಂದ್ರನ್ ಪುತ್ರನ ‘ಮುಗಿಲ್ ಪೇಟೆ’
ಭರತ್ ಎಸ್. ನಾವುಂದ ನಿರ್ದೇಶನ ಮಾಡಿದ ‘ಮುಗಿಲ್ ಪೇಟೆ’ ಚಿತ್ರಕ್ಕೆ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಹೀರೋ. ಅವರಿಗೆ ಜೋಡಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ಹಾಡುಗಳ ಮೂಲಕ ಗಮನ ಸೆಳೆದ ‘ಮುಗಿಲ್ ಪೇಟೆ’ ಚಿತ್ರದಲ್ಲಿ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ತಾರಾ ಮುಂತಾದವರ ನಟನೆಯಿಂದ ಚಿತ್ರದ ಮೆರುಗು ಹೆಚ್ಚಿದೆ. 2021ರ ನವೆಂಬರ್ 19ರಂದು ರಿಲೀಸ್ ಆಗಿದ್ದ ಈ ಸಿನಿಮಾ ಈಗ ಜೀ5 ಮೂಲಕ ಅಭಿಮಾನಿಗಳನ್ನು ರಂಜಿಸಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:14 am, Thu, 12 May 22