RRR OTT Release: ‘ಆರ್ಆರ್ಆರ್’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ? ಆ ದಿನಾಂಕಕ್ಕಾಗಿ ಕಾದಿರುವ ಫ್ಯಾನ್ಸ್
ಮನೆಯಲ್ಲೇ ಕುಳಿತು ಒಟಿಟಿ ಮೂಲಕ ‘ಆರ್ಆರ್ಆರ್’ ಸಿನಿಮಾ ನೋಡುವ ಸಮಯ ಹತ್ತಿರ ಆಗುತ್ತಿದೆ. ಈ ಚಿತ್ರದ ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ಕೆಲವೆಡೆ ವರದಿ ಆಗಿದೆ.
ಭಾರತೀಯ ಚಿತ್ರರಂಗದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾದ ರಾಜಮೌಳಿ (SS Rajamouli) ಅವರು ‘ಆರ್ಆರ್ಆರ್’ ಸಿನಿಮಾ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ ಅಬ್ಬರಿಸಿದೆ. ಹಲವು ಭಾಷೆಗಳಿಗೆ ಡಬ್ ಆಗಿ ತೆರೆಕಂಡ ಈ ಚಿತ್ರವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಈಗಲೂ ಕೆಲವು ಕಡೆಗಳಲ್ಲಿ ‘ಆರ್ಆರ್ಆರ್’ ಸಿನಿಮಾ (RRR Movie) ಪ್ರದರ್ಶನ ಕಾಣುತ್ತಿದೆ. 3ಡಿ ಅವತರಣಿಕೆಯನ್ನೂ ನೋಡಿ ಜನರು ಎಂಜಾಯ್ ಮಾಡಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾಗೆ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್ ಆಗಿದೆ. ರಾಮ್ ಚರಣ್, ಜ್ಯೂ. ಎನ್ಟಿಆರ್ ಕಾಂಬಿನೇಷನ್ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಈ ಚಿತ್ರ ಈಗ ಒಟಿಟಿ ಪ್ಲಾಟ್ಫಾರ್ಮ್ಗೆ ಬರಲು ಸಿದ್ಧವಾಗುತ್ತಿದೆ. ‘ಆರ್ಆರ್ಆರ್’ ಸಿನಿಮಾ ಒಟಿಟಿಯಲ್ಲಿ (RRR OTT Release) ಯಾವಾಗ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಈಗ ಗುಡ್ ನ್ಯೂಸ್ ಕೇಳಿಬಂದಿದೆ. ಮೇ 20ರಂದು ಈ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗಲಿದೆ ಎಂದು ಹೇಳಲಾಗುತ್ತಿದೆ. ಆ ಆದರೆ ಈ ಬಗ್ಗೆ ಚಿತ್ರತಂಡದಿಂದ ಅಥವಾ ಒಟಿಟಿ ಸಂಸ್ಥೆಯಿಂದ ಅಧಿಕೃತ ಘೋಷಣೆ ಆಗಿಲ್ಲ.
ಬಿಡುಗಡೆಗೂ ಮುನ್ನವೇ ‘ಆರ್ಆರ್ಆರ್’ ಸಿನಿಮಾ ಭಾರಿ ಬಿಸ್ನೆಸ್ ಮಾಡಿತ್ತು. ಎರಡು ಒಟಿಟಿ ಸಂಸ್ಥೆಗಳಿಗೆ ಈ ಚಿತ್ರದ ಪ್ರಸಾರ ಹಕ್ಕುಗಳು ಮಾರಾಟ ಆಗಿದ್ದವು. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ ‘ಆರ್ಆರ್ಆರ್’ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳನ್ನು ‘ಜೀ5’ ಸಂಸ್ಥೆ ಖರೀದಿಸಿದೆ. ಹಿಂದಿ ವರ್ಷನ್ ಅನ್ನು ನೆಟ್ಫ್ಲಿಕ್ಸ್ ಕೊಂಡುಕೊಂಡಿದೆ.
‘ಕೆಜಿಎಫ್: ಚಾಪ್ಟರ್ 2’ ರಿಲೀಸ್ ಆಗುವ ತನಕ ಚಿತ್ರಮಂದಿರಗಳಲ್ಲಿ ‘ಆರ್ಆರ್ಆರ್’ ಸಿನಿಮಾ ಅಬ್ಬರಿಸುತ್ತಿತ್ತು. ನಂತರ ಅದರ ಕಲೆಕ್ಷನ್ ಇಳಿಮುಖವಾಗುತ್ತ ಬಂತು. ಇನ್ನೇನಿದ್ದರೂ ಮನೆಯಲ್ಲೇ ಕುಳಿತು ಒಟಿಟಿ ಮೂಲಕ ‘ಆರ್ಆರ್ಆರ್’ ನೋಡುವ ಸಮಯ ಹತ್ತಿರ ಆಗಿದೆ. ಮೇ 20ರಂದು ಒಟಿಟಿಯಲ್ಲಿ ಈ ಚಿತ್ರ ಪ್ರಸಾರ ಆಗಲಿದೆ ಎಂದು ಕೆಲವೆಡೆ ವರದಿ ಆಗಿದೆ.
ಮೊದಲ ಲಾಕ್ಡೌನ್ ಬಳಿಕ ಒಟಿಟಿ ಪ್ಲಾಟ್ ಫಾರ್ಮ್ಗಳ ಪ್ರಭಾವ ಹೆಚ್ಚಿತು. ಮನೆಯಲ್ಲೇ ಕುಳಿತು ಹೊಸ ಬಗೆಯ ಮನರಂಜನೆ ಪಡೆಯುವುದಕ್ಕೆ ಜನರು ಹೊಂದಿಕೊಂಡರು. ಹಾಗಾಗಿ ಒಟಿಟಿ ಪ್ಲಾಟ್ಫಾರ್ಮ್ಗಳ ವ್ಯಾಪಿ ಹಿಗ್ಗುತ್ತಾ ಹೋಯಿತು. ಈಗಂತೂ ಒಟಿಟಿ ಸಂಸ್ಥೆಗಳ ನಡುವೆ ಭರ್ಜರಿ ಪೈಪೋಟಿ ಇದೆ. ಜನರನ್ನು ಆಕರ್ಷಿಸಲು ಬಗೆಬಗೆಯ ಆಫರ್ಗಳನ್ನು ನೀಡುವುದು, ಸೂಪರ್ ಹಿಟ್ ಸಿನಿಮಾಗಳನ್ನು ಮುಗಿಬಿದ್ದು ಕೊಂಡುಕೊಳ್ಳುವುದು ಸೇರಿದಂತೆ ಹಲವು ಬಗೆಯ ಪ್ರಯತ್ನಗಳನ್ನು ಒಟಿಟಿ ಪ್ಲಾಟ್ಫಾರ್ಮ್ಗಳು ಮಾಡುತ್ತಿವೆ.
ರಾಜಮೌಳಿ ಸಿನಿಮಾ ಎಂದರೆ ಅಭಿಮಾನಿಗಳು ಸಹಜವಾಗಿಯೇ ಅದ್ದೂರಿತನ ಬಯಸುತ್ತಾರೆ. ಅದಕ್ಕೆ ತಕ್ಕಂತೆಯೇ ‘ಆರ್ಆರ್ಆರ್’ ಸಿನಿಮಾ ಮೂಡಿಬಂದಿದೆ. ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಅವರು ಸಖತ್ ಆ್ಯಕ್ಷನ್ ಮೆರೆದಿದ್ದಾರೆ. ಜೊತೆಗೆ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗಿದೆ. ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರು ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿರುವುದರಿಂದ ಹಿಂದಿ ಪ್ರೇಕ್ಷಕರನ್ನು ಕೂಡ ಈ ಚಿತ್ರ ಸೆಳೆದುಕೊಂಡಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:44 pm, Thu, 5 May 22