RRR 2: ಆರ್ಆರ್ಆರ್ ಸೀಕ್ವೆಲ್ ಮಾಡಲು ಉತ್ಸಾಹ ತೋರಿದ ರಾಜಮೌಳಿ, ರಾಮ್ ಚರಣ್, ಜ್ಯೂ. ಎನ್ಟಿಆರ್
RRR Sequel: ‘ಆರ್ಆರ್ಆರ್ 2’ ಮಾಡುವ ಬಗ್ಗೆ ವಿಷಯ ಪ್ರಸ್ತಾಪ ಆಗಿದೆ. ಜ್ಯೂ. ಎನ್ಟಿಆರ್, ರಾಮ್ ಚರಣ್, ರಾಜಮೌಳಿ ಅವರು ಸೀಕ್ವೆಲ್ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ಹೇಳಿದ್ದಾರೆ.
ಗಲ್ಲಾ ಪೆಟ್ಟಿಗೆಯಲ್ಲಿ ‘ಆರ್ಆರ್ಆರ್’ (RRR ) ಸಿನಿಮಾ ಅಬ್ಬರಿಸುತ್ತಿದೆ. ಸಾವಿರಾರು ಕೋಟಿ ರೂಪಾಯಿ ಸಂಪಾದನೆ ಮಾಡಿರುವ ಈ ಚಿತ್ರಕ್ಕೆ ಜನರಿಂದ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ನಿರ್ದೇಶಕ ರಾಜಮೌಳಿ (Rajamouli) ಅವರ ಖಾತೆಗೆ ಈ ಮೂಲಕ ಮತ್ತೊಂದು ಬ್ಲಾಕ್ಬಸ್ಟರ್ ಹಿಟ್ ಸೇರ್ಪಡೆ ಆಗಿದೆ. ಸಿನಿಪ್ರಿಯರು ‘ಆರ್ಆರ್ಆರ್’ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಆ್ಯಕ್ಷನ್ ದೃಶ್ಯಗಳನ್ನು ಕಂಡು ಪ್ರೇಕ್ಷಕರು ವಾವ್ ಎಂದಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಗೆಲುವಿನಿಂದಾಗಿ ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಮಾರುಕಟ್ಟೆ ಹಿರಿದಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುತ್ತಿದ್ದಾರೆ. ಬಿಡುಗಡೆ ಆಗಿ ಹಲವು ದಿನ ಕಳೆದಿದ್ದರೂ ಕೂಡ ಈ ಸಿನಿಮಾ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಅಭಿಮಾನಿಗಳ ಪಾಲಿಗೆ ಒಂದು ಖುಷಿಯ ಸುದ್ದಿ ಸಿಕ್ಕಿದೆ. ಈ ಚಿತ್ರಕ್ಕೆ ಸೀಕ್ವೆಲ್ (RRR 2) ಮಾಡಲು ರಾಜಮೌಳಿ ಮತ್ತು ತಂಡದವರು ಉತ್ಸಾಹ ತೋರಿದ್ದಾರೆ.
‘ಆರ್ಆರ್ಆರ್’ ಸಿನಿಮಾ ತೆಲುಗಿನಲ್ಲಿ ಸಿದ್ಧವಾಗಿ ಹಿಂದಿ, ಕನ್ನಡ, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿದೆ. ಎಲ್ಲ ರಾಜ್ಯಗಳಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ಮುಂಬೈನಲ್ಲಿ ಸಕ್ಸಸ್ ಮೀಟ್ ಮಾಡಲಾಗಿದೆ. ಈ ವೇಳೆ ‘ಆರ್ಆರ್ಆರ್ 2’ ಮಾಡುವ ಬಗ್ಗೆ ವಿಷಯ ಪ್ರಸ್ತಾಪ ಆಗಿದೆ. ಜ್ಯೂ. ಎನ್ಟಿಆರ್, ರಾಮ್ ಚರಣ್, ರಾಜಮೌಳಿ ಅವರು ಸೀಕ್ವೆಲ್ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ಹೇಳಿದ್ದಾರೆ.
‘ಆರ್ಆರ್ಆರ್’ ಸಿನಿಮಾದ ಕಥೆಗಾರ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು ಸೀಕ್ವೆಲ್ ವಿಚಾರವನ್ನು ಖಚಿತಪಡಿಸಿದ್ದಾರೆ. ‘ಈ ಸಿನಿಮಾ ದೊಡ್ಡ ಯಶಸ್ಸು ಕಂಡಿರುವುದರಿಂದ ಫ್ರಾಂಚೈಸ್ ಮಾಡಲು ಆಲೋಚಿಸಿದ್ದೇವೆ. ಶೀಘ್ರದಲ್ಲೇ ಸೀಕ್ವೆಲ್ ಬರಲಿದೆ’ ಅಂತ ಅವರು ಹೇಳಿದ್ದಾರೆ ಎಂದು ವರದಿ ಆಗಿದೆ. ‘ಆರ್ಆರ್ಆರ್ ಸೀಕ್ವೆಲ್ ಬಗ್ಗೆ ರಾಜಮೌಳಿ ಅವರು ಪ್ಲ್ಯಾನ್ ಮಾಡಿದರೆ ಒಟ್ಟಿಗೆ ನಟಿಸಲು ನಮಗೆ ಖುಷಿ ಆಗುತ್ತದೆ. ಈ ಆಸೆ ಈಡೇರಲಿ’ ಎಂದು ರಾಮ್ ಚರಣ್ ಹೇಳಿದ್ದಾರೆ.
‘ರಾಜಮೌಳಿ ಅವರು ಆರ್ಆರ್ಆರ್ ಸೀಕ್ವೆಲ್ ಮಾಡಬೇಕು. ಈ ಕಥೆಗೆ ಒಂದು ಕನ್ಕ್ಲೂಷನ್ ಬೇಕು. ಇಂದು ನಾನು ಒಬ್ಬರ ಜೊತೆ ಮಾತನಾಡುತ್ತಿದ್ದೆ. ಯಾಕೆ ಅಂತ ಗೊತ್ತಿಲ್ಲ, ಆರ್ಆರ್ಆರ್ ಎಂಬುದು ಒಂದು ಫ್ರಾಂಚೈಸ್ ಅಂತ ಹೇಳಿದೆ. ಆ ಮಾತು ನಿಜವಾಗಲಿ’ ಎಂದು ಜ್ಯೂ. ಎನ್ಟಿಆರ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕೊಮರಮ್ ಭೀಮ್ ಎಂಬ ಪಾತ್ರವನ್ನು ಜ್ಯೂ. ಎನ್ಟಿಆರ್ ನಿಭಾಯಿಸಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ರಾಮ್ ಚರಣ್ ಬಣ್ಣ ಹಚ್ಚಿದ್ದಾರೆ.
ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಆದ ‘ಆರ್ಆರ್ಆರ್’ ಸಿನಿಮಾ ಉತ್ತರ ಭಾರತದಲ್ಲಿ ಧೂಳೆಬ್ಬಿಸಿದೆ. ಹಿಂದಿ ವರ್ಷನ್ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಿಂದ ರಾಜಮೌಳಿ ಅವರ ಹವಾ ಹೆಚ್ಚಿದೆ. ಈ ಚಿತ್ರಕ್ಕೆ ಸಿಕ್ಕಿರುವ ಗೆಲುವನ್ನು ಕಂಡು ಬಾಲಿವುಡ್ ಸ್ಟಾರ್ ಕಲಾವಿದರು ಕೂಡ ಬೆರಗಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ಭರ್ಜರಿ ಸೌಂಡು ಮಾಡುತ್ತಿರುವುದರಿಂದ ಹಿಂದಿ ಚಿತ್ರರಂಗದವರಿಗೆ ಚಿಂತೆ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಕೂಡ ಬಿಡುಗಡೆ ಆಗಲಿದೆ. ಆ ಚಿತ್ರವೂ ಹಿಂದಿಗೆ ಡಬ್ ಆಗಿದೆ. ಹಿಂದಿ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ:
ಸೌತ್ ಸಿನಿಮಾ ಬಗ್ಗೆ ಹಗುರಾಗಿ ಮಾತಾಡಿದ್ದ ಜಾನ್ ಅಬ್ರಾಹಂ; ‘ಆರ್ಆರ್ಆರ್’ ಎದುರಲ್ಲಿ ಹೀನಾಯ ಸೋಲು