‘ಕೆಜಿಎಫ್ 2’ ಎದುರು ಸೋತ ‘ಬೀಸ್ಟ್’ ಚಿತ್ರಕ್ಕೆ ಈಗ ಉಳಿದಿದ್ದು ಒಟಿಟಿ ಆಯ್ಕೆ ಮಾತ್ರ; ಯಾವಾಗ ರಿಲೀಸ್?
Beast Movie OTT: ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಚಿತ್ರಕ್ಕೆ ಥಿಯೇಟರ್ನಲ್ಲಿ ನಿರೀಕ್ಷಿತ ಮಟ್ಟದ ರೆಸ್ಪಾನ್ಸ್ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಮಾಪಕರು ಒಟಿಟಿ ಕಡೆಗೆ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.
ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ (KGF: Chapter 2) ಸಿನಿಮಾದ ಎದುರಿನಲ್ಲಿ ಬಿಡುಗಡೆ ಆಗುವ ಯಾವುದೇ ಚಿತ್ರ ಕೂಡ ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಲೇ ಇತ್ತು. ಆ ಎಚ್ಚರಿಕೆಯನ್ನು ‘ಬೀಸ್ಟ್’ ಸಿನಿಮಾ (Beast Movie) ಗಂಭೀರವಾಗಿ ಪರಿಗಣಿಸಲಿಲ್ಲ. ‘ಕೆಜಿಎಫ್ 2’ ರಿಲೀಸ್ ಆಗುವುದಕ್ಕಿಂತ ಒಂದು ದಿನ ಮುಂಚೆ ಅಂದರೆ, ಏ.13ರಂದು ದಳಪತಿ ವಿಜಯ್ (Thalapathy Vijay) ಅಭಿನಯದ ‘ಬೀಸ್ಟ್’ ಸಿನಿಮಾ ತೆರೆಕಂಡಿತು. ನಿರೀಕ್ಷೆಯಂತೆಯೇ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗೆ ಪೈಪೋಟಿ ನೀಡುವಲ್ಲಿ ಈ ಸಿನಿಮಾ ಸೋತಿದೆ. ಇದು ತಮಿಳಿನ ಸಿನಿಮಾ ಆಗಿದ್ದರೂ ಕೂಡ ತಮಿಳಿನಾಡಿನಲ್ಲೇ ‘ಕೆಜಿಎಫ್ 2’ ಎದುರು ನಿಲ್ಲಲ್ಲು ಇದಕ್ಕೆ ಸಾಧ್ಯವಾಗಿಲ್ಲ. ಪರಿಣಾಮವಾಗಿ ಈಗ ಒಟಿಟಿಯಲ್ಲಿ ಪ್ರಸಾರ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಚಿತ್ರಮಂದಿರದಲ್ಲಿ ಯಶಸ್ವಿ ಆಗದ ಈ ಚಿತ್ರ ಕಡೇ ಪಕ್ಷ ಒಟಿಟಿ ಪ್ಲಾಟ್ಫಾರ್ಮ್ ಮೂಲಕವಾದರೂ ಲಾಭ ಮಾಡಬಹುದಾ ಎಂಬ ಪ್ರಶ್ನೆ ಮೂಡಿದೆ. ಈ ಸಿನಿಮಾಗೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ದಳಪತಿ ವಿಜಯ್ಗೆ ಜೋಡಿಯಾಗಿ ಬಹುಭಾಷಾ ನಟಿ ಪೂಜಾ ಹೆಗ್ಡೆ ನಟಿಸಿದ್ದಾರೆ.
‘ಬೀಸ್ಟ್’ ಸಿನಿಮಾಗೆ ‘ಸನ್ ಪಿಕ್ಚರ್ಸ್’ ಸಂಸ್ಥೆ ಬಂಡವಾಳ ಹೂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಲಾಭ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ದೇಶಾದ್ಯಂತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾವನ್ನೇ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿರುವುದರಿಂದ ‘ಬೀಸ್ಟ್’ಗೆ ಹಿನ್ನಡೆ ಆಗಿದೆ. ಹಲವು ಭಾಷೆಗಳಲ್ಲಿ ರಿಲೀಸ್ ಆಗಿದ್ದರೂ ಕೂಡ ಏನೂ ಪ್ರಯೋಜನ ಆಗಿಲ್ಲ. ಸ್ವತಃ ತಮಿಳು ಪ್ರೇಕ್ಷಕರೇ ‘ಬೀಸ್ಟ್ ಚಿತ್ರಕ್ಕಿಂತಲೂ ಕೆಜಿಎಫ್ 2 ಸಿನಿಮಾ ಚೆನ್ನಾಗಿದೆ’ ಎಂದು ವಿಮರ್ಶೆ ನೀಡುತ್ತಿದ್ದಾರೆ. ಹಾಗಾಗಿ ಚಿತ್ರಮಂದಿರದಲ್ಲಿ ಇನ್ನೂ ಹೆಚ್ಚು ದಿನಗಳ ಕಾಲ ಈ ಸಿನಿಮಾ ಪ್ರದರ್ಶನ ಕಾಣಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ.
ಥಿಯೇಟರ್ನಲ್ಲಿ ಚೆನ್ನಾಗಿ ಲಾಭ ಮಾಡಲು ಸಾಧ್ಯವಾಗದ ಯಾವುದೇ ಸಿನಿಮಾ ಕೂಡ ಬೇಗನೆ ಒಟಿಟಿ ಪ್ಲಾಟ್ಫಾರ್ಮ್ಗೆ ಬಂದು ಬಿಡುತ್ತವೆ. ‘ಬೀಸ್ಟ್’ ಕೂಡ ಅದೇ ರೀತಿ ಮಾಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಸನ್ ನೆಕ್ಸ್ಟ್ ಮತ್ತು ನೆಟ್ಫ್ಲಿಕ್ಸ್ ಮೂಲಕ ಈ ಸಿನಿಮಾ ಪ್ರಸಾರ ಆಗಲಿದೆ. ನಾಲ್ಕು ವಾರಗಳ ಬಳಿಕ ಒಟಿಟಿಯಲ್ಲಿ ‘ಬೀಸ್ಟ್’ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಕೆಲವೆಡೆ ವರದಿ ಆಗಿದೆ. ಆದರೆ ನಿರ್ಮಾಪಕರು ಈ ಬಗ್ಗೆ ಅಧಿಕೃತ ಘೋಷಣೆ ಮಾಡುವುದು ಇನ್ನೂ ಬಾಕಿ ಇದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಎದುರು ‘ಬೀಸ್ಟ್’ ಚಿತ್ರ ಸೋಲಲು ಅನೇಕ ಕಾರಣಗಳಿವೆ. ಹಿಂದಿಗೆ ಡಬ್ ಆಗಿ ಈ ಎರಡೂ ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಉತ್ತರ ಭಾರತದಲ್ಲಿ ‘ಕೆಜಿಎಫ್ 2’ ತಂಡ ಪ್ರಚಾರ ಮಾಡಿದ ರೀತಿಯಲ್ಲಿ ‘ಬೀಸ್ಟ್’ ಚಿತ್ರತಂಡ ಪ್ರಮೋಷನ್ ಮಾಡಲಿಲ್ಲ. ಹೀರೋ ದಳಪತಿ ವಿಜಯ್ ಅವರು ಕೇವಲ ಒಂದು ಮಾಧ್ಯಮಕ್ಕೆ ಹೊರತುಪಡಿಸಿ ಬೇರೆ ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡಿಲ್ಲ. ಸಿನಿಮಾದ ಕಥೆ ಕೂಡ ಸವಕಲು ಆಗಿದೆ. ಅನೇಕ ದೃಶ್ಯಗಳಲ್ಲಿ ಲಾಜಿಕ್ ಇಲ್ಲ. ದ್ವಿತೀಯಾರ್ಧ ತುಂಬ ಸ್ಲೋ ಆಗಿದೆ. ಖಡಕ್ ವಿಲನ್ಗಳು ಇಲ್ಲ ಎಂಬ ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಇಂಥ ಹತ್ತು ಹಲವು ಕಾರಣಗಳಿಂದಾಗಿ ‘ಬೀಸ್ಟ್’ ಸಿನಿಮಾ ನೆಲಕಚ್ಚಿದೆ. ಈ ನಡುವೆ ದಳಪತಿ ವಿಜಯ್ ಪುತ್ರ ಸಂಜಯ್ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಆ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಕೌತುಕ ಮನೆ ಮಾಡಿದೆ.
ಇದನ್ನೂ ಓದಿ:
ಬೆಂಗಳೂರಲ್ಲಿ ‘ಬೀಸ್ಟ್’ ನೋಡಿ ಜನ ಏನಂದ್ರು? ಫ್ಯಾನ್ಸ್ ಸೂಪರ್ ಅಂದ್ರು, ಕೆಲವರು ಮುಖ ಹಿಂಡಿದ್ರು
‘ಬೀಸ್ಟ್’ ಚೆನ್ನಾಗಿಲ್ಲ ಎಂಬ ಹತಾಶೆಯಿಂದ ಥಿಯೇಟರ್ ಪರದೆಗೆ ಬೆಂಕಿ ಹಚ್ಚಿದ ವಿಜಯ್ ಫ್ಯಾನ್ಸ್? ವಿಡಿಯೋ ವೈರಲ್