ಕೊವಿಡ್ ಮೊದಲ ಬಾರಿಗೆ ಕಾಣಿಸಿಕೊಂಡಾಗ ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಯಿತು. ಭಾರತ ಕೂಡ ಇದಕ್ಕೆ ಹೊರತಾಗಿರಲಿಲ್ಲ. ದೇಶವನ್ನು ಹಲವು ವಾರಗಳ ಕಾಲ ಸಂಪೂರ್ಣ ಲಾಕ್ ಮಾಡಲಾಯಿತು. ಈ ಸಂದರ್ಭದಲ್ಲಿ ಜನರು ಮನರಂಜನೆಗೆ ಒಟಿಟಿಯತ್ತ ಮುಖ ಮಾಡಿದರು. ಹಲವು ಒಟಿಟಿ ಪ್ಲಾಟ್ಫಾರ್ಮ್ಗಳು (OTT Platform) ಹುಟ್ಟಿಕೊಂಡವು. ಅಮೇಜಾನ್ ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್ ಸೇರಿ ಅನೇಕ ಒಟಿಟಿ ಪ್ಲಾಟ್ಫಾರ್ಮ್ಗಳು ತಮ್ಮ ಉದ್ಯಮ ವಿಸ್ತರಿಸಿದವು. ಈ ಸಂದರ್ಭದಲ್ಲಿ ಕೆಲ ಸ್ಥಳೀಯ ಒಟಿಟಿಗಳು ಹುಟ್ಟಿಕೊಂಡವು. ಆ ಪೈಕಿ ‘ಆಹಾ’ ಒಟಿಟಿ (Aha OTT) ಪ್ಲಾಟ್ಫಾರ್ಮ್ ಕೂಡ ಒಂದು. ತೆಲುಗಿನಲ್ಲಿ ಆರಂಭವಾದ ಈ ಒಟಿಟಿ ಈಗ ತಮಿಳಿಗೂ ವಿಸ್ತರಣೆ ಆಗುತ್ತಿದೆ.
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಹಾಗೂ ಅವರ ತಂದೆ ರಾಮೇಶ್ವರ್ ರಾವ್ ಅವರು ‘ಆಹಾ’ ಒಟಿಟಿಯನ್ನು ಸ್ಥಾಪಿಸಿದರು. ಇದು ಇಷ್ಟು ದಿನ ತೆಲುಗಿಗೆ ಮಾತ್ರ ಸೀಮಿತವಾಗಿತ್ತು. ಹಲವು ವೆಬ್ ಸೀರಿಸ್ಗಳು, ಸಿನಿಮಾಗಳು ಈ ಒಟಿಟಿ ಪ್ಲಾಟ್ಫಾರ್ಮ್ ಮೂಲಕ ಪ್ರದರ್ಶನ ಕಂಡವು. ಇನ್ನು, ಹಲವು ಟಾಕ್ ಶೋಗಳನ್ನು ಈ ಒಟಿಟಿ ಪ್ಲಾಟ್ಫಾರ್ಮ್ ನಡೆಸಿಕೊಟ್ಟಿದೆ. ಈಗ ತಮಿಳು ಚಿತ್ರರಂಗಕ್ಕೂ ‘ಆಹಾ’ ಕಾಲಿಡುತ್ತಿದೆ. ನಟ ಸಿಂಬು ಹಾಗೂ ಮ್ಯೂಸಿಕ್ ಕಂಪೋಸರ್ ಅನಿರುದ್ಧ ರವಿಚಂದರ್ ತಮಿಳು ‘ಆಹಾ’ದ ಅಂಬಾಸಿಡರ್ ಆಗಿದ್ದಾರೆ.
ಹಲವು ತಿಂಗಳ ಕಾಲ ತಮಿಳು ‘ಆಹಾ’ಗಾಗಿ ಕೆಲಸಗಳು ನಡೆದಿವೆ. ಇಂದು (ಏಪ್ರಿಲ್ 14) ಚೆನ್ನೈನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಮಿಳು ‘ಆಹಾ’ವನ್ನು ರಾತ್ರಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ತಮಿಳು ಸಿನಿಮಾಗಳು ಈ ಒಟಿಟಿ ಮೂಲಕ ಪ್ರಸಾರ ಕಾಣಲಿದೆ. ತಮಿಳಿನಲ್ಲಿ ಈ ಒಟಿಟಿ ಯಶಸ್ಸು ಕಂಡರೆ, ಹಿಂದಿ, ಕನ್ನಡ ಭಾಷೆಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆಯೇ ಎನ್ನುವ ಕುತೂಹಲ ಕೂಡ ಮೂಡಿದೆ.
‘ಆಹಾ ತಮಿಳು ವರ್ಷನ್ ಅನಾವರಣ ಮಾಡಲು ನಾವು ಉತ್ಸುಕರಾಗಿದ್ದೇವೆ. ಇಲ್ಲಿ ವೆಬ್ ಸರಣಿಗಳು ಮತ್ತು ಸಿನಿಮಾಗಳ ಸಂಗ್ರಹ ಇರಲಿದೆ. ತಮಿಳು ವರ್ಷನ್ನಲ್ಲಿ ನಿರ್ದೇಶಕ ವೆಟ್ರಿಮಾರನ್ ಅವರ ‘ಪೆಟ್ಟಕಾಳೈ’, ಪ್ರಿಯಾಮಣಿ ಅವರ ‘ಭಾಮಾಕಲಾಪಂ’, ‘ಅಮ್ಮುಚಿ 2’, ‘ರಮಣಿ vs ರಮಣಿ 3’ ಮುಂತಾದ ಚಿತ್ರಗಳು ಇದರಲ್ಲಿವೆ. ಥಿಯೇಟರ್ನಲ್ಲಿ ರಿಲೀಸ್ ಆದ ಹಲವು ಸಿನಿಮಾಗಳ ಒಟಿಟಿ ಹಕ್ಕು ತಮ್ಮ ಬಳಿ ಇವೆ. ನಮ್ಮ ಒಟಿಟಿಯಿಂದ ಹಲವು ಪ್ರತಿಭೆಗಳು ಮುನ್ನೆಲೆಗೆ ಬರುತ್ತಾರೆ’ ಎಂದಿದ್ದಾರೆ ಅಲ್ಲು ಅರವಿಂದ್.
‘ಆಹಾಗೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹಲವು ಸಿನಿಮಾಗಳನ್ನು ಜನರಿಗೆ ತಲುಪಿಸಲು ಯಶಸ್ವಿ ಆಗಿದ್ದೇವೆ. ಆಹಾ ಈಗಷ್ಟೇ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿದೆ. ಶೀಘ್ರದಲ್ಲೇ ಜಾಗತಿಕವಾಗಿ ತಮಿಳು ಭಾಷೆಯವರಿಗೆ ಮನರಂಜನೆ ನೀಡಲು ನಮ್ಮ ವೇದಿಕೆ ಮುಂದಿರುತ್ತದೆ ಎಂದು ನಾವು ಭರವಸೆ ನೀಡುತ್ತೇವೆ’ ಎಂದಿದ್ದಾರೆ ಆಹಾ ಸಿಇಒ ಅಜಿತ್ ಠಾಕೂರ್.
ಕನ್ನಡದ ಹಲವು ಸಿನಿಮಾಗಳು ತೆಲುಗಿಗೆ ಡಬ್ ಆಗಿ ‘ಆಹಾ’ದಲ್ಲಿ ರಿಲೀಸ್ ಆಗಿವೆ. ಜಯತೀರ್ಥ ನಿರ್ದೇಶನದ, ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ‘ಬೆಲ್ಬಾಟಂ’ ‘ಆಹಾ’ದಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ರಿಷಬ್ ಅವರ ‘ಹೀರೋ’ ಚಿತ್ರ 2021ರ ಜುಲೈ 24ರಂದು ‘ಆಹಾ’ ಒಟಿಟಿಯಲ್ಲಿ ತೆರೆಕಂಡಿತ್ತು.
ಉಳಿದ ಒಟಿಟಿ ವೇದಿಕೆಗಳಿಗೆ ಹೋಲಿಸಿದರೆ ಆಹಾ ಸಬ್ಸ್ಕ್ರಿಪ್ಶನ್ ಬೆಲೆ ಕಡಿಮೆ ಇದೆ. ವರ್ಷದ ಚಂದಾದಾರರಾಗಲು 365 ರೂಪಾಯಿ ಪಾವತಿಸಿದರೆ ಸಾಕು. ಅಂದರೆ, ಒಂದು ದಿನಕ್ಕೆ ಒಂದು ರೂಪಾಯಿ ವೆಚ್ಛ ತಗುಲಲಿದೆ. ಈ ಪ್ಲಾಟ್ಫಾರ್ಮ್ಗೆ 18 ಲಕ್ಷಕ್ಕೂ ಅಧಿಕ ಪೇಯ್ಡ್ ಸಬಸ್ಕ್ರೈಬರ್ಗಳು ಇದ್ದಾರೆ.
ಇದನ್ನೂ ಓದಿ: ವಿಶ್ವಾದ್ಯಂತ ಅಬ್ಬರಿಸುತ್ತಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಒಟಿಟಿ ರಿಲೀಸ್ ಯಾವಾಗ?
ಐಎಂಡಿಬಿ, ಬುಕ್ ಮೈ ಶೋ ರೇಟಿಂಗ್ನಲ್ಲಿ ‘ಕೆಜಿಎಫ್ 2’ನದ್ದೇ ಪಾರುಪತ್ಯ; ಈ ಚಿತ್ರವನ್ನು ತಡೆಯೋರೆ ಇಲ್ಲ