
ಖ್ಯಾತ ನಿರ್ದೇಶಕ ರಾಜಮೌಳಿ ಅವರ ಬತ್ತಳಿಕೆಯಿಂದ ಬಂದ ‘ಆರ್ಆರ್ಆರ್’ ಸಿನಿಮಾ (RRR Movie) ಮಾಡಿದ ಮೋಡಿ ಅಷ್ಟಿಷ್ಟಲ್ಲ. ಸಿನಿಮಾ ಲೋಕದಲ್ಲಿ ಅವರೊಬ್ಬ ಮಾಂತ್ರಿಕ ಎಂಬುದು ಈ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಯಿತು. ವಿಶ್ವಾದ್ಯಂತ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವುದು ‘ಆರ್ಆರ್ಆರ್’ ಸಿನಿಮಾದ ಹೆಚ್ಚುಗಾರಿಕೆ ಈಗ ಈ ಚಿತ್ರ ಒಟಿಟಿ ಪ್ಲಾಟ್ಫಾರ್ಮ್ಗೆ ಕಾಲಿಡುತ್ತಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಬಳಿಕ ಈಗ ಮನೆಮನೆಗಳಲ್ಲೂ ಮನರಂಜನೆ ನೀಡಲು ಈ ಸಿನಿಮಾ ಬರುತ್ತಿದೆ. ‘ಆರ್ಆರ್ಆರ್’ ಚಿತ್ರ ಯಾವಾಗ ಒಟಿಟಿಗೆ ಬರಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದರು. ಆ ಕಾಯುವಿಕೆಗೆ ಈಗ ತೆರೆ ಬಿದ್ದಿದೆ. ಮೇ 20ರಂದು ಈ ಚಿತ್ರ ಜೀ5 (Zee5) ಮೂಲಕ ಪ್ರಸಾರ ಆಗಲಿದೆ. ಮೂಲ ತೆಲುಗಿನ ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಿಗೆ ಡಬ್ ಆಗಿದೆ. ಈ ಎಲ್ಲ ವರ್ಷನ್ಗಳು ಕೂಡ ಮೇ 20ರಿಂದ ವೀಕ್ಷಣೆಗೆ ಲಭ್ಯವಾಗಲಿವೆ. ವಿಶೇಷ ಎಂದರೆ ಮೇ 20ರಂದು ಜ್ಯೂ. ಎನ್ಟಿಆರ್ (Jr NTR) ಬರ್ತ್ಡೇ. ಆ ದಿನವೇ ‘ಆರ್ಆರ್ಆರ್’ ಸಿನಿಮಾದ ವರ್ಲ್ಡ್ ಪ್ರೀಮಿಯರ್ ಆಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
‘ಆರ್ಆರ್ಆರ್’ ಸಿನಿಮಾದಲ್ಲಿ ಕೊಮರಮ್ ಭೀಮ್ ಎಂಬ ಪಾತ್ರದಲ್ಲಿ ಜ್ಯೂ. ಎನ್ಟಿಆರ್ ನಟಿಸಿದ್ದಾರೆ. ಅವರ ಜೊತೆ ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನು ರಾಮ್ ಚರಣ್ ನಿಭಾಯಿಸಿದ್ದಾರೆ. ಇಬ್ಬರ ಪಾತ್ರಗಳು ಕೂಡ ಈ ಸಿನಿಮಾದಲ್ಲಿ ಸಖತ್ ಹೈಲೈಟ್ ಆಗಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದ ರೀತಿ ಕಂಡು ಬಾಲಿವುಡ್ ಮಂದಿ ಕೂಡ ನಿಬ್ಬೆರಗಾದರು. ಚಿತ್ರಮಂದಿರದಲ್ಲಿ ‘ಆರ್ಆರ್ಆರ್’ ಚಿತ್ರವನ್ನು ಮಿಸ್ ಮಾಡಿಕೊಂಡವರು ಮನೆಯಲ್ಲೇ ಕೂತು ಜೀ5 ಮೂಲಕ ನೋಡಬಹುದು. ಇನ್ನೊಮ್ಮೆ, ಮತ್ತೊಮ್ಮೆ, ಮೊಗದೊಮ್ಮೆ ನೋಡಬೇಕು ಎಂಬ ಹಂಬಲ ಇರುವವರು ಕೂಡ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ನೋಡಿ ಎಂಜಾಯ್ ಮಾಡಲಿದ್ದಾರೆ.
ಒಟಿಟಿಯಲ್ಲಿ ‘ಆರ್ಆರ್ಆರ್’ ಸಿನಿಮಾ ಪ್ರಸಾರದ ದಿನಾಂಕವನ್ನು ಬಹಿರಂಗ ಪಡಿಸುವ ಸಲುವಾಗಿ ಚಿತ್ರತಂಡ ಹೊಸ ಟ್ರೇಲರ್ ಹಂಚಿಕೊಂಡಿದೆ. ಈ ಮೊದಲು ರಿಲೀಸ್ ಆಗಿದ್ದ ಥಿಯೆಟ್ರಿಕಲ್ ಟ್ರೇಲರ್ಗಿಂತಲೂ ಈ ಟ್ರೇಲರ್ ಭಿನ್ನವಾಗಿದೆ. ಹಿನ್ನೆಲೆ ಸಂಗೀತ ಕೂಡ ಸಖತ್ ಕಿಕ್ ನೀಡುವಂತಿದೆ. ಚಿತ್ರದ ಅನೇಕ ಅದ್ದೂರಿ ದೃಶ್ಯಗಳನ್ನು ಪೋಣಿಸಿ ಈ ಟ್ರೇಲರ್ ಸಿದ್ಧಪಡಿಸಲಾಗಿದೆ. ಜೀ5, ಡಿವಿವಿ ಮೂವೀಸ್ ಹಾಗೂ ಆರ್ಆರ್ಆರ್ ಸಿನಿಮಾದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಹೊಸ ಟ್ರೇಲರ್ ಹಂಚಿಕೊಳ್ಳಲಾಗಿದೆ. ಅದಕ್ಕೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
‘ಆರ್ಆರ್ಆರ್’ ಸಿನಿಮಾದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಒಂದು ಗಮನಾರ್ಹ ಪಾತ್ರ ಮಾಡಿದ್ದಾರೆ. ನಾಯಕಿಯಾಗಿ ಬಿ-ಟೌನ್ ಬೆಡಗಿ ಆಲಿಯಾ ಭಟ್ ನಟಿಸಿದ್ದಾರೆ. ಹಾಗಾಗಿ ಉತ್ತರ ಭಾತರದ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ಹಿಂದಿ ವರ್ಷನ್ನಿಂದ ಈ ಚಿತ್ರ ಬರೋಬ್ಬರಿ 270 ಕೋಟಿ ರೂಪಾಯಿ ಗಳಿಸಿದೆ. ಒಟಿಟಿಯಲ್ಲೂ ಕೂಡ ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳಲಿದ್ದಾರೆ ಎಂಬ ಭರವಸೆಯೊಂದಿಗೆ ಮೇ 20ರಂದು ವರ್ಲ್ಡ್ ಪ್ರೀಮಿಯರ್ ಮಾಡಲಾಗುತ್ತಿದೆ. ಆ ಮೂಲಕ ಜ್ಯೂ. ಎನ್ಟಿಆರ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್ ನೀಡಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:12 pm, Fri, 13 May 22