
ಚಿತ್ರಮಂದಿರಗಳಲ್ಲಿ ಡಿಸೆಂಬರ್ 1ರಂದು ತೆರೆಕಂಡು ಸೂಪರ್ ಹಿಟ್ ಆದ ‘ಅನಿಮಲ್’ ಸಿನಿಮಾ (Animal Movie) ಯಾವಾಗ ಒಟಿಟಿಗೆ ಬರಲಿದೆ ಎಂದು ಸಿನಿಪ್ರಿಯರು ಕೇಳುತ್ತಲೇ ಇದ್ದರು. ಈಗ ಅವರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಿರ್ಮಾಪಕರ ಕಡೆಯಿಂದ ‘ಅನಿಮಲ್’ ಸಿನಿಮಾದ ಒಟಿಟಿ ರಿಲೀಸ್ (Animal OTT Release) ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜನವರಿ 26ರಂದು ‘ಅನಿಮಲ್’ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗುತ್ತಿದೆ. ನೆಟ್ಫ್ಲಿಕ್ಸ್ (Netflix) ಮೂಲಕ ಈ ಚಿತ್ರದ ಸ್ಟ್ರೀಮಿಂಗ್ ಆರಂಭ ಆಗುತ್ತಿದೆ. ರಣಬೀರ್ ಕಪೂರ್ ಅವರಿಗೆ ಈ ಚಿತ್ರದಿಂದ ಬಹು ದೊಡ್ಡ ಯಶಸ್ಸು ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅವರ ಚಾರ್ಮ್ ಕೂಡ ಹೆಚ್ಚಾಗಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಡಿಮ್ಯಾಂಡ್ ಡಬಲ್ ಆಗಿದೆ.
‘ಅನಿಮಲ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 555 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್ನ ಲೆಕ್ಕವೂ ಸೇರಿದರೆ 900 ಕೋಟಿ ರೂಪಾಯಿ ಮೀರುತ್ತದೆ. ಈ ಸಿನಿಮಾ ಇಷ್ಟೆಲ್ಲ ಸದ್ದು ಮಾಡಲು ಹಲವು ಕಾರಣಗಳಿವೆ. ಬಿಡುಗಡೆ ಆದ ದಿನದಿಂದಲೇ ಈ ಸಿನಿಮಾ ವಿವಾದದ ಸುಳಿಗೆ ಸಿಲುಕಿತ್ತು. ಆದರೂ ಕೂಡ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.
ನೆಟ್ಫ್ಲಿಕ್ಸ್ ಮೂಲಕ ‘ಅನಿಮಲ್’ ಸಿನಿಮಾವನ್ನು ವಿಶ್ವಾದ್ಯಂತ ಇರುವ ಪ್ರೇಕ್ಷಕರು ನೋಡಬಹುದಾಗಿದೆ. ಒಟಿಟಿಯಲ್ಲಿ ನೋಡುವ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯಲು ರಣಬೀರ್ ಕಪೂರ್ ಅವರು ಕಾದಿದ್ದಾರೆ. ಈ ಸಿನಿಮಾದಲ್ಲಿನ ಅವರ ಪಾತ್ರಕ್ಕೆ ವಿಮರ್ಶಕರಿಂದ ತುಂಬ ಟೀಕೆ ವ್ಯಕ್ತವಾಗಿದೆ. ಇದನ್ನು ಸ್ತ್ರೀ ವಿರೋಧಿ ಪಾತ್ರ ಎಂದು ಕೂಡ ಅನೇಕರು ಖಂಡಿಸಿದ್ದುಂಟು.
ಇದನ್ನೂ ಓದಿ: ಕಪ್ಪು-ಬಿಳುಪಿನ ಫೋಟೋದಲ್ಲೂ ಪಳಪಳನೆ ಹೊಳೆದ ‘ಅನಿಮಲ್’ ಸುಂದರಿ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ಒಟಿಟಿಯಲ್ಲಿ ‘ಅನಿಮಲ್’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ನಿರ್ಮಾಪಕರು ಮತ್ತು ಸಹ-ನಿರ್ಮಾಪಕರ ನಡುವೆ ಕಾನೂನಿನ ಸಮರ ನಡೆಯುತ್ತಿದ್ದರಿಂದ ಒಟಿಟಿ ರಿಲೀಸ್ ತಡವಾಯಿತು. ಈಗ ಅಂತಿಮವಾಗಿ ಈ ಸಿನಿಮಾ ಒಟಿಟಿಗೆ ಅಂಗಳಕ್ಕೆ ಎಂಟ್ರಿ ನೀಡುತ್ತಿದೆ. ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ರಜೆ ಇದೆ. ಜೊತೆಗೆ ವೀಕೆಂಡ್ ಕೂಡ ಬರುತ್ತಿದೆ. ಹಾಗಾಗಿ ಒಟಿಟಿಯಲ್ಲಿ ‘ಅನಿಮಲ್’ ಸಿನಿಮಾಗೆ ದಾಖಲೆ ಪ್ರಮಾಣದಲ್ಲಿ ವೀವ್ಸ್ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ