
ರಣವೀರ್ ಸಿಂಗ್ (Ranveer Singh) ನಿಜ ಜೀವನದ ವ್ಯಕ್ತಿತ್ವದ ಬಗ್ಗೆ ಅನೇಕರಿಗೆ ಪರಿಚಯ ಇದೆ. ಯಾವ ವಿಚಾರವನ್ನೂ ಅವರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಸದಾ ಚಿಲ್ ಮೋಡ್ ಆನ್ ಮಾಡಿಕೊಂಡಿರುತ್ತಾರೆ. ಚಿತ್ರ ವಿಚಿತ್ರ ಬಟ್ಟೆ ಧರಿಸಿ ಪ್ರತ್ಯಕ್ಷವಾಗುತ್ತಾರೆ. ಈ ಕಾರಣಕ್ಕೂ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಕೆಲವೊಮ್ಮೆ ಈ ವಿಚಾರಕ್ಕೆ ಅವರು ಟ್ರೋಲ್ ಆಗಿದ್ದು ಕೂಡ ಇದೆ. ಆದರೆ, ಈ ಬಗ್ಗೆ ರಣವೀರ್ ಸಿಂಗ್ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಈಗ ರಣವೀರ್ ಸಿಂಗ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರ ಮೇಲೆ ಕರಡಿ ಒಂದು ದಾಳಿಗೆ ಇಳಿದಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ರಣವೀರ್ ಸಿಂಗ್ ಈ ರೀತಿಯ ಹುಚ್ಚು ಸಾಹಸಕ್ಕೆ ಇಳಿದಿದ್ದು ಬೇರ್ ಗ್ರಿಲ್ಸ್ ಅವರ ‘ಮ್ಯಾನ್ vs ವೈಲ್ಡ್’ ಶೋಗಾಗಿ. ಬ್ರಿಟನ್ ಸಾಹಸಿ ಬೇರ್ ಗ್ರಿಲ್ಸ್ ಸಖತ್ ಫೇಮಸ್. ಅವರು ಕಾಡುಗಳಲ್ಲಿ ಯಾವುದೇ ಭಯ ಇಲ್ಲದೆ ಸುತ್ತಾಟ ನಡೆಸುತ್ತಾರೆ. ಸಿಕ್ಕ ಸಿಕ್ಕ ಕೀಟಗಳನ್ನು ಹಿಡಿದು ತಿಂದು ತೇಗುತ್ತಾರೆ. ಕೆಲವರಿಗೆ ಇದು ವಾಕರಿಕೆ ತರಿಸಿದ್ದೂ ಇದೆ. ಈಗ ಬೇರ್ ಗ್ರಿಲ್ಸ್ ಜತೆ ರಣವೀರ್ ಸಿಂಗ್ ಸಾಹಸಕ್ಕೆ ಮುಂದಾಗಿದ್ದಾರೆ. ಈ ಎಪಿಸೋಡ್ ಜುಲೈ 8ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದ್ದು, ಇದರ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.
ಇದಕ್ಕೆ ‘ರಣವೀರ್ vs ವೈಲ್ಡ್’ ಎಂದು ಹೆಸರು ಇಡಲಾಗಿದೆ. ಈ ವಿಡಿಯೋದಲ್ಲಿ ರಣವೀರ್ ಅವರು ಬೇರ್ ಗ್ರಿಲ್ಸ್ ಜತೆ ಭಯಾನಕ ಕಾಡಿನಲ್ಲಿ ಸುತ್ತಾಟ ನಡೆಸಿದ್ದಾರೆ. ಹಂಚಿಕೊಂಡಿರುವ ವಿಡಿಯೋದಲ್ಲಿ ರಣವೀರ್ ಅವರನ್ನು ಕರಡಿಯೊಂದು ಬೆನ್ನುಹತ್ತಿ ಬಂದಿದೆ. ಅತಿ ದುರ್ಗಮ ಪ್ರದೇಶಗಳಲ್ಲಿ ರಣವೀರ್ ಸಿಂಗ್ ಸುತ್ತಾಟ ನಡೆಸಿದ್ದಾರೆ. ಅವರು ಮಲಗಿದ್ದಾಗ ಪಕ್ಕದಲ್ಲೇ ಕರಡಿಯೊಂದು ಬಂದು ನಿಂತಿರುವುದು ಕೂಡ ಈ ವಿಡಿಯೋದಲ್ಲಿದೆ. ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿರುವ ಈ ಥ್ರಿಲ್ಲಿಂಗ್ ಶೋಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ರಣವೀರ್ ಸಿಂಗ್ ಹೊಸ ಸಿನಿಮಾ ಲೀಕ್; ‘ಜಯೇಶ್ಭಾಯ್’ಗೆ 2 ಆಘಾತ
ರಣವೀರ್ ಸಿಂಗ್ ಅವರ ನಟನೆಯ ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದು ಫ್ಲಾಪ್ ಆಯಿತು. ಈಗ ಅವರು ‘ಸರ್ಕಸ್’ ಹಾಗೂ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:31 pm, Fri, 10 June 22