ಕಳೆದೊಂದು ವರ್ಷದಲ್ಲಿ ನಟಿ ಸಮಂತಾ ರುತ್ ಪ್ರಭು (Samantha) ಅವರ ಖಾಸಗಿ ಜೀವನದಲ್ಲಿ ಭಾರಿ ಬದಲಾವಣೆ ಆಗಿದೆ. ಅವರು ವಿಚ್ಛೇದನ ಪಡೆದು ಮತ್ತೆ ಸಿಂಗಲ್ ಆಗುತ್ತಾರೆ ಎಂದು ಅಭಿಮಾನಿಗಳು ಊಹಿಸಿರಲಿಲ್ಲ. 2021ರ ಅಕ್ಟೋಬರ್ನಲ್ಲಿ ಸಮಂತಾ ಮತ್ತು ನಾಗ ಚೈತನ್ಯ (Naga Chaitanya) ಅವರು ವಿಚ್ಛೇದನ ಘೋಷಿಸಿದರು. ಅಷ್ಟಕ್ಕೂ ಈ ಸೆಲೆಬ್ರಿಟಿ ದಂಪತಿ ಡಿವೋರ್ಸ್ ಪಡೆದಿದ್ದು ಯಾಕೆ ಎಂಬುದು ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಇಬ್ಬರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಹಲವು ವರ್ಷಗಳ ಕಾಲ ಪ್ರೀತಿಸಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇಬ್ಬರ ನಡುವೆ ಮನಸ್ತಾಪ ಮೂಡಿದ್ದರಿಂದ ಸಂಸಾರದಲ್ಲಿ ಬಿರುಕು ಉಂಟಾಯಿತು. ಕಡೆಗೂ ವಿಚ್ಛೇದನ ಪಡೆಯುವ ಮೂಲಕ ಮದುವೆ ಮುರಿದುಬಿತ್ತು. ಆ ನಂತರದ ದಿನಗಳ ಬಗ್ಗೆ ‘ಕಾಫಿ ವಿತ್ ಕರಣ್’ (Koffee with Karan) ಶೋನಲ್ಲಿ ಸಮಂತಾ ಬಾಯಿ ಬಿಟ್ಟಿದ್ದಾರೆ.
‘ಕಾಫಿ ವಿತ್ ಕರಣ್ ಶೋ’ 7ನೇ ಸೀಸನ್ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ ಮೂಲಕ ಬಿತ್ತರ ಆಗುತ್ತಿರುವ ಈ ಶೋನಲ್ಲಿ ಸಮಂತಾ ಅವರು ಭಾಗಿ ಆಗಿದ್ದಾರೆ. ಅವರ ಜೊತೆ ಅಕ್ಷಯ್ ಕುಮಾರ್ ಕೂಡ ಅತಿಥಿಯಾಗಿ ಬಂದಿದ್ದಾರೆ. ನಿರೂಪಕ ಕರಣ್ ಜೋಹರ್ ಕೇಳಿದ ಅನೇಕ ಪ್ರಶ್ನೆಗಳಿಗೆ ಸಮಂತಾ ನೇರವಾಗಿ ಉತ್ತರ ನೀಡಿದ್ದಾರೆ. ಗುರುವಾರ (ಜುಲೈ 21) ಸಮಂತಾ-ಅಕ್ಷಯ್ ಕುಮಾರ್ ಎಪಿಸೋಡ್ ಪ್ರಸಾರ ಆಗಿದೆ.
ವಿಚ್ಛೇದನ ಆದ ಬಳಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಸಮಂತಾ ತಿಳಿಸಿದ್ದಾರೆ. ‘ತುಂಬ ಕಷ್ಟ ಆಗಿತ್ತು’ ಎಂದು ಅವರು ಹೇಳಿದ್ದಾರೆ. ಆದರೆ ಈಗ ಅವರು ಆ ಕಷ್ಟದಿಂದ ಹೊರಬಂದಿದ್ದಾರೆ. ವಿಚ್ಛೇದನದ ನೋವಿನಿಂದ ಚೇತರಿಸಿಕೊಂಡಿದ್ದಾರೆ. ‘ಈಗ ಪರಿಸ್ಥಿತಿ ಚೆನ್ನಾಗಿದೆ. ಹಿಂದೆಂದಿಗಿಂತಲೂ ಈಗ ಹೆಚ್ಚು ಗಟ್ಟಿ ಆಗಿದ್ದೇನೆ’ ಎಂದು ಸಮಂತಾ ಹೇಳಿದ್ದಾರೆ. ಅವರು ‘ಕಾಫಿ ವಿತ್ ಕರಣ್ ಶೋ’ನಲ್ಲಿ ಭಾಗಿ ಆಗಿರುವುದು ಇದೇ ಮೊದಲು.
ಸಮಂತಾ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್ಗಳಿವೆ. ತೆಲುಗಿನ ‘ಖುಷಿ’, ‘ಯಶೋಧ’, ‘ಶಾಕುಂತಲಂ’ ಮುಂತಾದ ಸಿನಿಮಾಗಳ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಸೂಪರ್ ಹಿಟ್ ಆದ ಬಳಿಕ ಒಟಿಟಿಯಿಂದ ಅವರಿಗೆ ಸಖತ್ ಆಫರ್ ಬರುತ್ತಿದೆ. ದಕ್ಷಿಣ ಭಾರತಕ್ಕಷ್ಟೇ ಅವರು ಸೀಮಿತ ಆಗಿಲ್ಲ. ಇಂಗ್ಲಿಷ್ ನಿರ್ದೇಶಕ ಫಿಲಿಪ್ ಜಾನ್ ಜೊತೆ ಅವರು ‘ಅರೇಂಜ್ಮೆಂಟ್ಸ್ ಆಫ್ ಲವ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.