ಶಿವರಾಜ್ ಕುಮಾರ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿಯೂ ಶಿವಣ್ಣನ ಅಭಿಮಾನಿ ಬಳಗ ಬಲು ದೊಡ್ಡದು. ತಮಿಳು, ತೆಲುಗಿನ ಸಿನಿಮಾಗಳಲ್ಲಿಯೂ ಶಿವಣ್ಣ ನಟಿಸಿದ್ದು, ಅಲ್ಲಿನ ಪ್ರೇಕ್ಷಕರು ಶಿವಣ್ಣನಿಗೆ ವಿಶೇಷ ಗೌರವ ನೀಡುತ್ತಾರೆ. ಶಿವಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದ ತಮಿಳಿನ ‘ಜೈಲರ್’ ಸಿನಿಮಾ ಬಿಡುಗಡೆ ಬಳಿಕವಂತೂ ಶಿವರಾಜ್ ಕುಮಾರ್ ಅವರಿಗೆ ಪರಭಾಷೆ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಇದೀಗ ಶಿವಣ್ಣನ ಸಿನಿಮಾಗಳಿಗೆ ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ.
ಶಿವರಾಜ್ ಕುಮಾರ್ ನಟಿಸಿರುವ ಹಿಟ್ ಸಿನಿಮಾ ಒಂದು ಇದೀಗ ತೆಲುಗು ಒಟಿಟಿಯೊಂದರಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ತೆಲುಗಿನ ‘ಆಹಾ’ ಒಟಿಟಿಯಲ್ಲಿ ಶಿವರಾಜ್ ಕುಮಾರ್ ನಟಿಸಿರುವ ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆ ಆಗುತ್ತಿದೆ. ‘ಭೈರತಿ ರಣಗಲ್’ ಸಿನಿಮಾ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ರುಕ್ಮಿಣಿ ವಸಂತ್, ರಾಹುಲ್ ಭೋಸ್, ಛಾಯಾ ಸಿಂಗ್ ಸೇರಿದಂತೆ ಇನ್ನೂ ಹಲವರು ನಟಿಸಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿತ್ತು.
ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವೇ ಬಿಡುಗಡೆ ಆಗಿದ್ದ ಈ ಸಿನಿಮಾ ಇದೀಗ ತೆಲುಗಿಗೆ ಡಬ್ ಆಗಿ ಆಹಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಫೆಬ್ರವರಿ 13 ರಿಂದ ಆಹಾ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯ ಆಗಲಿದೆ. ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿರುವ ಈ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್. ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸುಮಾರು 30 ಕೋಟಿಗೂ ಹೆಚ್ಚಿನ ಹಣ ಗಳಿಸಿತು.
ಇದನ್ನೂ ಓದಿ:ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
ಅನಾರೋಗ್ಯದಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್, ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮರಳಿ ಬಂದಿದ್ದಾರೆ. ಪ್ರಸ್ತುತ ವಿಶ್ರಾಂತಿಯಲ್ಲಿರುವ ಶಿವಣ್ಣನ ಕೈಯಲ್ಲಿ ಇದೀಗ ಹಲವು ಸಿನಿಮಾಗಳಿವೆ. ಶಿವಣ್ಣ ಪ್ರಸ್ತುತ ‘ಭೈರವನ ಕೊನೆ ಸಂದೇಶ’ ಸಿನಿಮಾದಲ್ಲಿ ನಟಿಸಬೇಕಿದೆ. ಅನಾರೋಗ್ಯದ ನಡುವೆಯೇ ‘45’ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ. ರಾಮ್ ಚರಣ್, ಜಾನ್ಹವಿ ಕಪೂರ್ ನಟಿಸುತ್ತಿರುವ ತೆಲುಗಿನ ಸಿನಿಮಾದಲ್ಲಿಯೂ ಶಿವಣ್ಣ ನಟಿಸಲಿದ್ದಾರೆ. ತಮಿಳಿನ ಒಂದು ಸಿನಿಮಾದಲ್ಲಿ ನಟಿಸುವುದು ಬಾಕಿ ಇದೆ. ಕನ್ನಡದಲ್ಲಿ ‘ಘೋಸ್ಟ್ 2’ ಸಿನಿಮಾ ಸೆಟ್ಟೇರಬೇಕಿದೆ. ‘ಕಬ್ಜ 2’ ಶುರುವಾಗಬೇಕಿದೆ, ‘ಎ ಫಾರ್ ಆನಂದ್’ ಸಿನಿಮಾ ಚಿತ್ರೀಕರಣ ಶುರುವಾಗಬೇಕಿದೆ. ಒಟ್ಟಾರೆ ಶಿವಣ್ಣನ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ವಿಶ್ರಾಂತಿ ಬಳಿಕ ಮತ್ತೊಮ್ಮೆ ಬ್ಯುಸಿ ಆಗಲಿದ್ದಾರೆ ಶಿವರಾಜ್ ಕುಮಾರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ