
ಕಾಲಿವುಡ್ನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರು ಆ್ಯಕ್ಷನ್-ಕಟ್ ಹೇಳಿರುವ ‘ವಿಡುದಲೈ’ ಸಿನಿಮಾ ಜೀ5ನಲ್ಲಿ ಪ್ರಸಾರ ಕಂಡು ಎಲ್ಲರ ಮೆಚ್ಚುಗೆ ಗಳಿಸಿದೆ. ತಮಿಳಿನ ಈ ಸಿನಿಮಾವನ್ನು ಈಗ ಕನ್ನಡದಲ್ಲೂ ವೀಕ್ಷಿಸಬಹುದು.

ವಿಜಯ್ ಸೇತುಪತಿ, ಸೂರಿ, ಕನ್ನಡದ ಸರ್ದಾರ್ ಸತ್ಯ, ಗೌತಮ್ ಮೆನನ್ ಮುಂತಾದ ಅನೇಕ ಕಲಾವಿದರು ನಟಿಸಿರುವ ಈ ಚಿತ್ರವನ್ನು ನೋಡಿದ ವಿಮರ್ಶಕರ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತೀಚೆಗೆ ಪರಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದ್ದು, ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಈಗ ‘ವಿಡುದಲೈ’ ಸಿನಿಮಾ ಕೂಡ ಕನ್ನಡದಲ್ಲಿ ನೋಡುವ ಅವಕಾಶ ದೊರೆತಿದೆ.

ಆರ್.ಎಸ್. ಇನ್ಫೋಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಎಸ್. ಎಲ್ರೆಡ್ ಕುಮಾರ್ ಅದ್ದೂರಿಯಾಗಿ ‘ವಿಡುದಲೈ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ಮತ್ತು ಕ್ರಾಂತಿಕಾರಿ ಹೋರಾಟಗಾರನೊಬ್ಬನ ನಡುವಿನ ಕಥೆ ಈ ಚಿತ್ರದಲ್ಲಿದೆ.

‘ವಿಡುದಲೈ’ ಕಥೆಯನ್ನು 2 ಭಾಗದಲ್ಲಿ ತೆರೆಗೆ ತರಲಾಗುತ್ತಿದೆ. ಮೊದಲ ಪಾರ್ಟ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಎರಡನೇ ಭಾಗದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ.