
ಮಂಚು ವಿಷ್ಣು (Manchu Vishnu) ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಕಣ್ಣಪ್ಪ’ ಸಿನಿಮಾ ನಾಳೆ (ಜೂನ್ 27) ಬಿಡುಗಡೆ ಆಗಲಿದೆ. ಸಿನಿಮಾ ಮಂಚು ವಿಷ್ಣು ಕಾರಣಕ್ಕೆ ಅಲ್ಲದೆ, ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿರುವ ನಟರ ಕಾರಣಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ‘ಕಣ್ಣಪ್ಪ’ ಸಿನಿಮಾನಲ್ಲಿ ನಟರಾದ ಪ್ರಭಾಸ್, ಅಕ್ಷಯ್ ಕುಮಾರ್ ಹಾಗೂ ಮೋಹನ್ ಲಾಲ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರಗಳನ್ನು ಪ್ರಧಾನವಾಗಿರಿಸಿಕೊಂಡೆ ಸಿನಿಮಾದ ಪ್ರಚಾರವನ್ನು ಮಂಚು ವಿಷ್ಣು ಮತ್ತು ಮೋಹನ್ ಬಾಬು ಮಾಡುತ್ತಿದ್ದಾರೆ. ಅಷ್ಟಕ್ಕೂ ಅತಿಥಿ ಪಾತ್ರಗಳಲ್ಲಿ ನಟಿಸಿರುವ ನಟರು ಪಡೆದಿರುವ ಸಂಭಾವನೆ ಎಷ್ಟು?
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ‘ಕಣ್ಣಪ್ಪ’ ಮೊದಲ ತೆಲುಗು ಸಿನಿಮಾ. ಅವರೇ ಈ ಹಿಂದೆ ಹೇಳಿಕೊಂಡಿರುವಂತೆ ಅಕ್ಷಯ್ ಕುಮಾರ್ ಯಾವ ಕಾರಣಕ್ಕೂ ಹಣ ಪಡೆಯದೆ ಕೆಲಸ ಮಾಡುವುದಿಲ್ಲವಂತೆ. ಈ ಸಿನಿಮಾದ ಅತಿಥಿ ಪಾತ್ರಕ್ಕೂ ಅಕ್ಷಯ್ ಕುಮಾರ್ ದೊಡ್ಡ ಮೊತ್ತದ ಹಣವನ್ನೇ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಅಕ್ಷಯ್ ಕುಮಾರ್ ಕೇವಲ ಒಂದು ದಿನವಷ್ಟೆ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರಂತೆ. ಒಂದು ದಿನದ ಶೂಟಿಂಗ್ಗೆ ಅಕ್ಷಯ್ ಕುಮಾರ್ ಬರೋಬ್ಬರಿ ಆರು ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದಾರೆ.
ಇನ್ನು ನಟ ಮೋಹನ್ಲಾಲ್ ಅವರು ಸಹ ಕೇವಲ ಒಂದೇ ದಿನ ಶೂಟಿಂಗ್ನಲ್ಲಿ ಭಾಗಿ ಆಗಿದ್ದರಂತೆ. ಆದರೆ ಮೋಹನ್ ಲಾಲ್ ಅವರು ಈ ಸಿನಿಮಾನಲ್ಲಿ ನಟಿಸಲು ಯಾವುದೇ ಸಂಭಾವನೆ ಪಡೆದಿಲ್ಲ ಎನ್ನಲಾಗುತ್ತಿದೆ. ಮೋಹನ್ ಲಾಲ್ ಅವರು ಉಚಿತವಾಗಿ ಸಿನಿಮಾನಲ್ಲಿ ನಟಿಸಿದ್ದಾರಂತೆ. ಇನ್ನು ಭಾರತದ ದುಬಾರಿ ನಟರಲ್ಲಿ ಒಬ್ಬರಾಗಿರುವ ಪ್ರಭಾಸ್ ಸಹ ಒಂದೇ ಒಂದು ರೂಪಾಯಿ ಸಹ ಹಣ ಪಡೆಯದೆ ಸಿನಿಮಾನಲ್ಲಿ ನಟಿಸಿದ್ದಾರೆ. ಪ್ರಭಾಸ್ ಒಂದಕ್ಕೂ ಹೆಚ್ಚು ದಿನ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರಂತೆ. ಸುಮಾರು 30 ನಿಮಿಷಕ್ಕೂ ಹೆಚ್ಚು ಸಮಯದ ಸ್ಕ್ರೀನ್ ಸಮಯ ಪ್ರಭಾಸ್ ಅವರಿಗಿದೆ ಹಾಗಿದ್ದರೂ ಸಹ ಪ್ರಭಾಸ್ ಯಾವುದೇ ಸಂಭಾವನೆ ಪಡೆದಿಲ್ಲ.
ಇದನ್ನೂ ಓದಿ:ಬಿಡುಗಡೆಗೂ ಮುನ್ನವೇ ‘ಕಣ್ಣಪ್ಪ’ ಸಿನಿಮಾ ನೋಡಿ ಭೇಷ್ ಎಂದ ರಜನಿಕಾಂತ್
ಈ ಮೂವರು ಪಾತ್ರವೇ ಅಲ್ಲದೆ, ನಟಿ ಕಾಜೊಲ್, ಶರತ್ ಕುಮಾರ್, ಬ್ರಹ್ಮಾನಂದಂ ಅವರುಗಳು ಸಹ ಸಿನಿಮಾದ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರುಗಳು ತಲಾ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಸಿನಿಮಾದ ಬಹುತೇಕ ಚಿತ್ರೀಕರಣ ನ್ಯೂಜಿಲೆಂಡ್ನಲ್ಲಿ ನಡೆದಿದ್ದು, ಅತಿಥಿ ಪಾತ್ರಗಳಿಗೆ ಪ್ರಯಾಣ ಭತ್ಯೆ ಇನ್ನಿತರೆಗಳನ್ನು ನೀಡಲಾಗಿತ್ತಂತೆ.
‘ಕಣ್ಣಪ್ಪ’ ಸಿನಿಮಾ, ಬೇಡರ ಕಣ್ಣಪ್ಪನ ಕತೆಯನ್ನು ಹೊಂದಿದೆ. ಸಿನಿಮಾದ ಟ್ರೈಲರ್, ಟೀಸರ್ ಈಗಾಗಲೇ ಬಿಡುಗಡೆ ಆಗಿವೆ. ಸಿನಿಮಾನಲ್ಲಿ ಮಂಚು ವಿಷ್ಣು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಪ್ರೀತಿ ಮುಕುಂದನ್ ನಟಿಸಿದ್ದಾರೆ. ಬ್ರಹ್ಮಾನಂದಂ ಮತ್ತು ವೆಂಕಟೇಶ್ ಪ್ರಭು ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ನಟ ದೇವರಾಜ್ ಸಮುದಾಯದ ಮುಖಂಡನ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ