ಬಿಡುಗಡೆಗೂ ಮುನ್ನವೇ ‘ಕಣ್ಣಪ್ಪ’ ಸಿನಿಮಾ ನೋಡಿ ಭೇಷ್ ಎಂದ ರಜನಿಕಾಂತ್
ಬಹಳ ಅದ್ದೂರಿಯಾಗಿ ‘ಕಣ್ಣಪ್ಪ’ ಸಿನಿಮಾ ನಿರ್ಮಾಣ ಮಾಡಲಾಗಿದೆ. ರಜನಿಕಾಂತ್ ಅವರಿಗೆ ಈ ಚಿತ್ರ ಇಷ್ಟ ಆಗಿದೆ. ವಿಷ್ಣು ಮಂಜು ಅಭಿನಯದ ಈ ಸಿನಿಮಾವನ್ನು ಇತ್ತೀಚೆಗೆ ರಜನಿಕಾಂತ್ ವೀಕ್ಷಿಸಿ, ತಮ್ಮ ವಿಮರ್ಶೆಯನ್ನು ತಿಳಿಸಿದರು. ಇದರಿಂದಾಗಿ ನಿರ್ಮಾಪಕ, ನಟ ಮೋಹನ್ ಬಾಬು ಅವರಿಗೆ ದೊಡ್ಡ ಬೆಂಬಲ ಸಿಕ್ಕಂತಾಗಿದೆ.

ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಇತ್ತೀಚೆಗೆ ಈ ಸಿನಿಮಾವನ್ನು ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಅದಕ್ಕೆ ಕಾರಣ ಆಗಿದ್ದು ‘ಕಣ್ಣಪ್ಪ’ (Kannappa) ನಿರ್ಮಾಪಕ ಮೋಹನ್ ಬಾಬು ಮತ್ತು ಕಾಲಿವುಡ್ ನಟ ರಜನಿಕಾಂತ್ ನಡುವೆ ಇರುವ ಸ್ನೇಹ. 30 ವರ್ಷಗಳ ಹಿಂದೆ ತೆಲುಗಿನ ‘ಪೆದರಾಯುಡು’ ಸಿನಿಮಾದಲ್ಲಿ ರಜನಿಕಾಂತ್ ಮತ್ತು ಮೋಹನ್ ಬಾಬು (Mohan Babu) ಅವರು ಒಟ್ಟಿಗೆ ನಟಿಸಿದ್ದರು.
1995ರ ಜೂನ್ 15ರಂದು ‘ಪೆದರಾಯುಡು’ ತೆರೆಕಂಡಿತ್ತು. ಆ ಕಾಲದಲ್ಲಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ರವಿ ರಾಜ ಪಿನಿಸೆಟ್ಟಿ ಅವರು ನಿರ್ದೇಶನ ಮಾಡಿದ್ದರು. ಈಗ ಆ ಸಿನಿಮಾಗೆ 30 ವರ್ಷ ಕಳೆದಿದೆ. ಆ ಸ್ಮರಣೀಯ ಕ್ಷಣಗಳನ್ನು ರಜನಿಕಾಂತ್ ಮತ್ತು ಮೋಹನ್ ಬಾಬು ಅವರು ಮೆಲುಕು ಹಾಕಿದರು. ಚೆನ್ನೈನಲ್ಲಿ ಅವರಿಬ್ಬರು ಭೇಟಿಯಾದರು. ‘ಪೆದರಾಯುಡು’ ಚಿತ್ರ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಬ್ಬರೂ ಸ್ಟಾರ್ ನಟರು ‘ಕಣ್ಣಪ್ಪ’ ಸಿನಿಮಾವನ್ನು ವೀಕ್ಷಿಸಿದರು.
ಜೂನ್ 27ರಂದು ಜಾಗತಿಕ ಮಟ್ಟದಲ್ಲಿ ‘ಕಣ್ಣಪ್ಪ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶಿವನ ಭಕ್ತ ಕಣ್ಣಪ್ಪನ ಕಹಾನಿಯನ್ನು ವಿಶಿಷ್ಟವಾಗಿ ತೋರಿಸಲಾಗುತ್ತಿದೆ. ಸಿನಿಮಾ ನೋಡಿದ ನಂತರ ರಜನಿಕಾಂತ್ ಭಾವುಕರಾದರು ಎಂದು ಚಿತ್ರತಂಡ ತಿಳಿಸಿದೆ. ‘ಇದು ಅಸಾಧಾರಣ ಸಿನಿಮಾ. ಎಮೋಷನ್, ದೃಶ್ಯ ವೈಭವ ಮತ್ತು ಆಧ್ಯಾತ್ಮ ತುಂಬಾ ಚೆನ್ನಾಗಿದೆ’ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಈ ಭೇಟಿ ಬಳಿಕ ರಜನಿಕಾಂತ್ ಬಗ್ಗೆ ಮೋಹನ್ ಬಾಬು ಮಾತನಾಡಿ, ‘ನಾನು 22 ವರ್ಷಗಳಿಂದ ನಿರೀಕ್ಷಿಸುತ್ತಿದ್ದ ರಜನಿಕಾಂತ್ ಅವರ ಆಲಿಂಗನ ಇಂದು ದೊರೆತಿದೆ’ ಎಂದು ಹೇಳಿದರು. ಕಣ್ಣಪ್ಪ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ಅವರು ನಿರ್ದೇಶನ ಮಾಡಿದ್ದಾರೆ. ಮಗನ ಸಿನಿಮಾಗೆ ಮೋಹನ್ ಬಾಬು ಬಂಡವಾಳ ಹೂಡಿದ್ದಾರೆ. ಬಹುತಾರಾಗಣದ ಈ ಚಿತ್ರವು ತೆಲುಗು, ಕನ್ನಡ, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ: ಮಗನಿಗಾಗಿ ಒಂದಾದ ಧನುಷ್, ಐಶ್ವರ್ಯಾ ರಜನಿಕಾಂತ್; ಫೋಟೋ ವೈರಲ್
‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಚು, ಮೋಹನ್ ಬಾಬು, ಆರ್. ಶರತ್ಕುಮಾರ್, ಮಧೂ ಮುಂತಾದವರು ನಟಿಸಿದ್ದಾರೆ. ಮೋಹನ್ ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಕಾಜಲ್ ಅಗರ್ವಾಲ್ ಮುಂತಾದ ಸ್ಟಾರ್ ಕಲಾವಿದರು ಅತಿಥಿ ಪಾತ್ರಗಳನ್ನು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








