ಮಗನಿಗಾಗಿ ಒಂದಾದ ಧನುಷ್, ಐಶ್ವರ್ಯಾ ರಜನಿಕಾಂತ್; ಫೋಟೋ ವೈರಲ್
ಡಿವೋರ್ಸ್ ಪಡೆದಿದ್ದರೂ ಕೂಡ ಮಗನಿಗಾಗಿ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಸ್ವತಃ ಧನುಷ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಅಭಿಮಾನಿಗಳು ಈ ವೈರಲ್ ಫೋಟೋಗೆ ಕಮೆಂಟ್ ಮಾಡುತ್ತಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ..

ಕಾಲಿವುಡ್ನ ಖ್ಯಾತ ನಟ ಧನುಷ್ (Dhanush) ಅವರು ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆ 2004ರಲ್ಲಿ ಮದುವೆ ಆಗಿದ್ದರು. 20 ವರ್ಷಗಳ ಬಳಿಕ, ಅಂದರೆ 2024ರಲ್ಲಿ ಅವರು ವಿಚ್ಛೇದನ ಪಡೆದುಕೊಂಡರು. ಈ ಜೋಡಿಗೆ ಯಾತ್ರ ಮತ್ತು ಲಿಂಗ ಎಂಬಿಬ್ಬರು ಗಂಡು ಮಕ್ಕಳು ಇದ್ದಾರೆ. ಡಿವೋರ್ಸ್ ಪಡೆದಿದ್ದರೂ ಕೂಡ ಪಾಲಕರಾಗಿ ತಮ್ಮ ಜಬಾಬ್ದಾರಿಯನ್ನು ಐಶ್ವರ್ಯಾ ರಜನಿಕಾಂತ್ (Aishwarya Rajinikanth) ಹಾಗೂ ಧನುಷ್ ಅವರು ನಿಭಾಯಿಸುತ್ತಿದ್ದಾರೆ. ಹಿರಿಯ ಮಗ ಯಾತ್ರ (Yathra) ಸಲುವಾಗಿ ಐಶ್ವರ್ಯಾ ಮತ್ತು ಧನುಷ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ.
ಯಾತ್ರ ಈಗ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಮಗನ ಹೈಸ್ಕೂಲ್ ಗ್ರಾಜುಯೇಷನ್ ಕಾರ್ಯಕ್ರಮದಲ್ಲಿ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಪಾಲ್ಗೊಂಡಿದ್ದಾರೆ. ಮಗನ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುವ ಸಲುವಾಗಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಧನುಷ್, ಐಶ್ವರ್ಯಾ ಹಾಗೂ ಯಾತ್ರ ಒಟ್ಟಿಗೆ ಇರುವ ಫೋಟೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಧನುಷ್ ಅವರು ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಹೆಮ್ಮೆಯ ಪೋಷಕರು’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಮಗನನ್ನು ತಬ್ಬಿಕೊಂಡು ಧನುಷ್ ಮತ್ತು ಐಶ್ವರ್ಯಾ ಬೆನ್ನು ತಟ್ಟಿದ್ದಾರೆ. ‘ಅಭಿನಂದನೆಗಳು, ನಿಮ್ಮನ್ನು ಮತ್ತೆ ಜೊತೆಯಾಗಿ ನೋಡಲು ಬಹಳ ಖುಷಿ ಆಗುತ್ತಿದೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
View this post on Instagram
2022ರಲ್ಲಿ ಮೊದಲ ಬಾರಿಗೆ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ವಿಚ್ಛೇದನ ಘೋಷಿಸಿದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಮದುವೆಯಾಗಿ 18 ವರ್ಷಗಳ ಬಳಿಕ ಅವರು ವಿಚ್ಛೇದನ ಪಡೆಯುವ ಶಾಕಿಂಗ್ ಸುದ್ದಿಯನ್ನು ನೀಡಿದ್ದರು. ‘ದಂಪತಿಯಾಗಿ, ಸ್ನೇಹಿತರಾಗಿ, ಹಿತೈಶಿಗಳಾಗಿ 18 ವರ್ಷ ಕಳೆದಿದ್ದೇವೆ. ಇದು ತಿಳುವಳಿಕೆ, ಹೊಂದಾಣಿಕೆ ಮತ್ತು ಬೆಳವಣಿಗೆಯ ಪಯಣವಾಗಿತ್ತು. ನಮ್ಮ ದಾರಿ ಬೇರೆಯಾಗುವ ಸ್ಥಾನದಲ್ಲಿ ಇಂದು ನಾವು ನಿಂತಿದ್ದೇವೆ’ ಎಂದು ಧನುಷ್ ಪೋಸ್ಟ್ ಮಾಡಿದ್ದರು. 2024ರಲ್ಲಿ ಅವರಿಗೆ ವಿಚ್ಛೇದನ ಸಿಕ್ಕಿತು.
ಇದನ್ನೂ ಓದಿ: ‘ಕರ್ಮ ಬಡ್ಡಿ ಸಮೇತ ಬರುತ್ತೆ’; ಧನುಷ್ ವಿಚ್ಛೇದನಕ್ಕೆ ಟಾಂಗ್ ಕೊಟ್ರಾ ನಯನತಾರಾ?
ಸಿನಿಮಾಗಳಲ್ಲಿ ಧನುಷ್ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಕುಬೇರ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಧನುಷ್ ಜೊತೆ ರಶ್ಮಿಕಾ ಮಂದಣ್ಣ, ನಾಗಾರ್ಜುನ ಮುಂತಾದವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಆಯಿತು. ಜೂನ್ 20ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:16 am, Sun, 1 June 25








