
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ‘ಪ್ರಾಜೆಕ್ಟ್ ಕೆ’ (Project K) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಅಭಿಮಾನಿಗಳಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಇದೆ. ಈವರೆಗೂ ಪ್ರಭಾಸ್ ನಟಿಸಿದ ಎಲ್ಲ ಸಿನಿಮಾಗಳಿಗಿಂತಲೂ ‘ಪ್ರಾಜೆಕ್ಟ್ ಕೆ’ ಭಿನ್ನವಾಗಿರಲಿದೆ ಎಂಬ ಭರವಸೆ ಮೂಡಿದೆ. ಹಲವು ರೀತಿಯಲ್ಲಿ ಈ ಸಿನಿಮಾವನ್ನು ಪ್ರಮೋಟ್ ಮಾಡಲಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯಲಾಗುತ್ತಿದೆ. ಈಗ ಪ್ರಭಾಸ್ (Prabhas) ಜೊತೆಗೆ ರಾಣಾ ದಗ್ಗುಬಾಟಿ (Rana Daggubati) ಕೂಡ ಸಾಥ್ ನೀಡಿದ್ದಾರೆ. ಇವರಿಬ್ಬರೂ ಅಮೆರಿಕದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿದೆ.
ಅಮೆರಿಕದ ಸ್ಯಾನ್ ಡಿಯಾಗೋ ನಗರಕ್ಕೆ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ತೆರಳಿದ್ದಾರೆ. ಅಲ್ಲಿ ಅವರು ‘ಪ್ರೊಜೆಕ್ಟ್ ಕೆ’ ಸಿನಿಮಾದ ಟೈಟಲ್ ಇರುವ ಬಟ್ಟೆ ಧರಿಸಿ ನಿಂತಿದ್ದಾರೆ. ಆ ಫೋಟೋವನ್ನು ಚಿತ್ರತಂಡದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾನ್ ಡಿಯಾಗೋದಲ್ಲಿ ನಡೆಯಲಿರುವ ‘ಕಾಮಿಕ್ ಕಾನ್’ ಉತ್ಸವದಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿಮಾವನ್ನು ಪ್ರಚಾರ ಮಾಡಲಾಗುವುದು. ಈ ರೀತಿ ಮಾಡುತ್ತಿರುವ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ ‘ಪ್ರಾಜೆಕ್ಟ್ ಕೆ’ ಪಾತ್ರವಾಗುತ್ತಿದೆ.
‘ಪ್ರಾಜೆಕ್ಟ್ ಕೆ’ ಸಿನಿಮಾಗೆ ‘ವೈಜಯಂತಿ ಮೂವೀಸ್’ ಸಂಸ್ಥೆಯು ಬಂಡವಾಳ ಹೂಡುತ್ತಿದೆ. ಇದು ಸೈನ್ಸ್ ಫಿಕ್ಷನ್ ಸಿನಿಮಾ ಆದ್ದರಿಂದ ನಿರೀಕ್ಷೆ ಮೂಡಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ಬಿಡುಗಡೆ ಆಯಿತು. ನಾಗ್ ಅಶ್ವಿನ್ ಅವರ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ಕಾರ್ ರ್ಯಾಲಿ ನಡೆಸಲಾಗಿದೆ. ‘ಪ್ರೊಜೆಕ್ಟ್ ಕೆ’ ಶೀರ್ಷಿಕೆ ಅಚ್ಚಾಗಿರುವ ಟಿ-ಶರ್ಟ್ಗಳನ್ನು ಧರಿಸಿ ಅಭಿಮಾನಿಗಳು ವಿವಿಧ ದೇಶಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.
‘ಬಾಹುಬಲಿ 2’ ಬಳಿಕ ಪ್ರಭಾಸ್ ಅವರಿಗೆ ಸರಿಯಾದ ಗೆಲುವು ಸಿಕ್ಕಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಆದಿಪುರುಷ್’ ಸಿನಿಮಾ ಹೀನಾಯವಾಗಿ ಸೋತಿತು. ಈಗ ಅಭಿಮಾನಿಗಳು ‘ಪ್ರಾಜೆಕ್ಟ್ ಕೆ’ ಮತ್ತು ‘ಸಲಾರ್’ ಸಿನಿಮಾಗಳ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ‘ಪ್ರಾಜೆಕ್ಟ್ ಕೆ’ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇದೆಯಾದರೂ ಈಗಲೇ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.