
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರು ‘ಕಲ್ಕಿ 2898 ಎಡಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿ ಗಮನ ಸೆಳೆದಿದೆ. ಪ್ರಭಾಸ್ ಅವರ ಗೆಟಪ್ ಕೂಡ ಅಭಿಮಾನಿಗಳಿಗೆ ಇಷ್ಟ ಆಗಿದೆ. ಇದು ಸೈನ್ಸ್ ಫಿಕ್ಷನ್ ಸಿನಿಮಾ ಆದ್ದರಿಂದ ಬಹಳ ಕಾಳಜಿ ವಹಿಸಿ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಲಾಗುತ್ತಿದೆ. ಈ ಹಂತದಲ್ಲಿ ಯಾವುದೇ ದೃಶ್ಯಗಳು ಲೀಕ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಿದ್ದರೂ ಕೂಡ ಒಂದು ಸಣ್ಣ ತುಣುಕು ಲೀಕ್ ಆಗಿದೆ. ಹಾಗಂತ ಯಾರೋ ಕಿಡಿಗೇಡಿಗಳು ಈ ವಿಡಿಯೋವನ್ನು ಲೀಕ್ ಮಾಡಿಲ್ಲ. ಬದಲಿಗೆ ಸ್ವತಃ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರತಂಡದವರೇ ಇದನ್ನು ಹರಿಬಿಟ್ಟಿದ್ದಾರೆ. ಅದಕ್ಕೆ ಒಂದು ವಿಶೇಷ ಕಾರಣ ಕೂಡ ಇದೆ. ಟಾಲಿವುಡ್ ನಟ ‘ಮೆಗಾ ಸ್ಟಾರ್’ ಚಿರಂಜೀವಿ (Megastar Chiranjeevi) ಅವರಿಗೆ ಬರ್ತ್ಡೇ ವಿಶ್ ಮಾಡುವ ಸಲುವಾಗಿ ಈ ವಿಡಿಯೋವನ್ನು ಲೀಕ್ ಮಾಡಲಾಗಿದೆ.
ಆಗಸ್ಟ್ 22ರಂದು ಚಿರಂಜೀವಿ ಅವರ ಹುಟ್ಟುಹಬ್ಬ. ಅವರಿಗೆ ಶುಭ ಕೋರಲು ‘ಕಲ್ಕಿ 2898 ಎಡಿ’ ಸಿನಿಮಾ ತಂಡದವರು ನೇರವಾಗಿ ಎಡಿಟಿಂಗ್ ರೂಮ್ನಿಂದ ಒಂದು ವಿಡಿಯೋ ಕ್ಲಿಪ್ ಹರಿಬಿಟ್ಟಿದ್ದಾರೆ. ಅದರಲ್ಲಿ ಪ್ರಭಾಸ್ ಅವರು ಗ್ಯಾಸ್ ಕಟರ್ ಹಿಡಿದುಕೊಂಡು ಪೋಸ್ ನೀಡಿದ್ದಾರೆ. ಅದು ಚಿರಂಜೀವಿ ನಟನೆಯ ‘ಗ್ಯಾಂಗ್ ಲೀಡರ್’ ಸಿನಿಮಾದಿಂದ ಸ್ಫೂರ್ತಿ ಪಡೆದ ದೃಶ್ಯ ಎಂದು ‘ಕಲ್ಕಿ 2898 ಎಡಿ’ ತಂಡ ಹೇಳಿಕೊಂಡಿದೆ. ಇದನ್ನು ನೋಡಿ ಚಿರು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ ಮತ್ತು ಚಿರಂಜೀವಿ ಫ್ಯಾನ್ಸ್ ಇದನ್ನು ವೈರಲ್ ಮಾಡುತ್ತಿದ್ದಾರೆ.
‘ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ವೈಜಯಂತಿ ಮೂವೀಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲಿ ಅನೇಕ ಸ್ಟಾರ್ ಕಲಾವಿದರು ನಟಿಸುತ್ತಿದ್ದಾರೆ ಎಂಬುದು ವಿಶೇಷ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮುಂತಾದ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಕಲ್ಕಿ 2898 ಎಡಿ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿಯಾಗಿದೆ.
ಇದನ್ನೂ ಓದಿ: ಪ್ರಭಾಸ್ ಎದುರು ಸ್ಪರ್ಧೆಗೆ ಇಳಿದ ಅಗ್ನಿಹೋತ್ರಿ; ‘ದಿ ವ್ಯಾಕ್ಸಿನ್ ವಾರ್’ ರಿಲೀಸ್ ಡೇಟ್ ಘೋಷಣೆ
ಪ್ರಭಾಸ್ ಅವರು ‘ಬಾಹುಬಲಿ 2’ ಬಳಿಕ ಗೆಲುವು ಕಂಡಿಲ್ಲ. ‘ರಾಧೆ ಶ್ಯಾಮ್’, ‘ಸಾಹೋ’, ‘ಆದಿಪುರುಷ್’ ಸಿನಿಮಾಗಳು ಸೋತಿವೆ. ಹಾಗಾಗಿ ಅವರು ಮುಂಬರುವ ಸಿನಿಮಾಗಳ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ‘ಕಲ್ಕಿ 2898 ಎಡಿ’ ಸಿನಿಮಾದ ಜೊತೆಗೆ ‘ಸಲಾರ್’ ಚಿತ್ರದ ಕೆಲಸಗಳಲ್ಲೂ ಪ್ರಭಾಸ್ ತೊಡಗಿಕೊಂಡಿದ್ದಾರೆ. ಆ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ ಹೂಡುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.