
ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಜನವರಿ 09ರಂದು ಬಿಡುಗಡೆ ಆಗಿತ್ತು. ಪ್ರಭಾಸ್ ಅವರ ಈ ಹಿಂದಿನ ಸಿನಿಮಾಗಳ ರೀತಿಯೇ ಬಿಡುಗಡೆ ಆದ ಮೊದಲ ದಿನ ಭಾರಿ ಗಳಿಕೆಯನ್ನು ಸಿನಿಮಾ ಮಾಡಿತ್ತು. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸುಮಾರು 112 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಿನಿಮಾ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನದಿಂದಲೇ ಸಿನಿಮಾದ ಉರುಳುವಿಕೆ ಪ್ರಾರಂಭವಾಯ್ತು. ಸಿನಿಮಾ ನೋಡಿದವರು ನೆಗೆಟಿವ್ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಹಳ ಕ್ರಿಂಜ್ ಆದ ಕತೆ, ದೃಶ್ಯಗಳನ್ನು ಸಿನಿಮಾ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಯ್ತು. ಇದೇ ಕಾರಣಕ್ಕೆ ಎರಡನೇ ದಿನದಿಂದಲೇ ಸಿನಿಮಾದ ಕಲೆಕ್ಷನ್ ಕುಸಿಯಲು ಆರಂಭಿಸಿತು. ಬಿಡುಗಡೆ ಆದ ಮೂರೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ 88% ಕುಸಿತ ಕಂಡಿದೆ.
ಮೊದಲ ದಿನ 112 ಕೋಟಿ ಗಳಿಕೆ ಮಾಡಿದ್ದ ‘ದಿ ರಾಜಾ ಸಾಬ್’ ಸಿನಿಮಾ ಮೂರು ದಿನದ ಬಳಿಕ ಸೋಮವಾರ ಗಳಿಸಿರುವುದು ಕೇವಲ 6 ಕೋಟಿ ರೂಪಾಯಿ. ಆಂಧ್ರ, ತೆಲಂಗಾಣಗಳಲ್ಲಿ ಈಗ ಸಂಕ್ರಾಂತಿ ರಜೆಗಳು ಚಾಲ್ತಿಯಲ್ಲಿವೆ ಹಾಗಿದ್ದರೂ ಸಹ ‘ದಿ ರಾಜಾ ಸಾಬ್’ ಸಿನಿಮಾ ಜನರನ್ನು ಸೆಳೆಯಲು ವಿಫಲವಾಗಿದೆ. ಮೂರನೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ ಭಾರಿ ದೊಡ್ಡ ಇಳಿಕೆ ಕಂಡು ಬಂದಿದ್ದು, ಪ್ರಭಾಸ್ ಅವರ ಈ ಹಿಂದಿನ ಫ್ಲಾಪ್ಗಳಾದ ‘ಆದಿಪುರುಷ್’ ಮತ್ತು ‘ಸಾಹೋ’ ಸಿನಿಮಾಗಳಿಗಿಂತಲೂ ಕಳಪೆ ಆಗಿದೆ ‘ದಿ ರಾಜಾ ಸಾಬ್’ ಸಿನಿಮಾದ ಗಳಿಕೆ.
ಇದನ್ನೂ ಓದಿ:ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ: ಸಿನಿಮಾ ಸ್ಟೈಲ್ನಲ್ಲಿ ನಡೀತು ಹತ್ಯೆ!
ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ನಲ್ಲಿ 112 ಕೋಟಿ ಗಳಿಸಿದ್ದ ರಾಜಾ ಸಾಬ್. ಎರಡನೇ ದಿನ ಅಂದರೆ ಶನಿವಾರ ಭಾರತ ಬಾಕ್ಸ್ ಆಫೀಸ್ನಲ್ಲಿ 30 ಕೋಟಿ ರೂಪಾಯಿ ಗಳಿಸಿತು. ಬಳಿಕ ಭಾನುವಾರ ಈ ಕಲೆಕ್ಷನ್ ಇನ್ನಷ್ಟು ತಗ್ಗಿ 22 ಕೋಟಿಗೆ ಬಂತು. ಬಳಿಕ ಸೋಮವಾರದ ಕಲೆಕ್ಷನ್ ಅಂತೂ ಇನ್ನು ಧಾರುಣವಾಗಿ ಕುಸಿದಿದ್ದು ಕೇವಲ 4 ಕೋಟಿ ಗಳಿಕೆ ಮಾಡಿದೆ. ವಿದೇಶಿ ಕಲೆಕ್ಷನ್ ಸೇರಿದಂತೆ ಸುಮಾರು 6 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಆ ಮೂಲಕ ಪ್ರಭಾಸ್ ಅವರ ಇತ್ತೀಚೆಗಿನ ಫ್ಲಾಪ್ಗಳಲ್ಲಿಯೇ ಧಾರುಣ ಫ್ಲಾಪ್ ಆಗುವತ್ತ ದಾಪುಗಾಲು ಹಾಕುತ್ತಿದೆ ‘ದಿ ರಾಜಾ ಸಾಬ್’ ಸಿನಿಮಾ.
‘ದಿ ರಾಜಾ ಸಾಬ್’ ಸಿನಿಮಾನಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕಾಮಿಡಿ ಹಾರರ್ ಕತೆ ಒಳಗೊಂಡಿದೆ. ಸಿನಿಮಾನಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ನಾಯಕಿಯರು. ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ. ಸಿನಿಮಾನಲ್ಲಿ ಸಂಜಯ್ ಮತ್ತು ಬೊಮನ್ ಇರಾನಿ ಅಂಥಹಾ ಪ್ರತಿಭಾವಂತ ನಟರೂ ಸಹ ಇದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ ಮಾತನಾಡಿದ್ದ ನಿರ್ದೇಶಕ ಮಾರುತಿ, ಭಾರತೀಯ ಚಿತ್ರರಂಗದಲ್ಲೇ ಯಾರೂ ತೆಗೆಯದ ರೀತಿ ನಾವು ಹಾರರ್ ಸಿನಿಮಾ ಮಾಡಿದ್ದೀವಿ ಎಂದಿದ್ದರು. ಭಾರಿ ಭರವಸೆಯನ್ನು ಸಿನಿಮಾ ಬಗ್ಗೆ ವ್ಯಕ್ತಪಡಿಸಿದ್ದರು ಆದರೆ ಇದೀಗ ಸಿನಿಮಾ ಫ್ಲಾಪ್ ಆಗುವ ಸೂಚನೆ ದಟ್ಟವಾಗಿ ಕಾಣುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ