
ಪ್ಯಾನ್ ಇಂಡಿಯಾ (Pan India) ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಮೊದಲ ದಿನವೇ ವಿಶ್ವಾದ್ಯಂತ ₹100 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ‘ದಿ ರಾಜಾ ಸಾಬ್’ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ ಸಿನಿಮಾ. ‘ರಾಜಾ ಸಾಬ್’ ಸಿನಿಮಾದ ಮೂಲಕ ನಟ ಪ್ರಭಾಸ್ ಒಂದು ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ತಾವು ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್ ಎಂಬುದನ್ನು ಖಾತ್ರಿ ಪಡಿಸಿದ್ದಾರೆ.
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಮೊದಲ ದಿನ 100 ಕೋಟಿ ಗಳಿಕೆ ಮಾಡುವ ಮೂಲಕ ಪ್ರಭಾಸ್ ನಟನೆಯ ಸತತ ಆರು ಸಿನಿಮಾಗಳು ಮೊದಲ ದಿನವೇ 100 ಕೋಟಿ ಗಳಿಕೆ ಮಾಡಿದಂತಾಗಿದೆ. ಈ ಅಪರೂಪದ ದಾಖಲೆ ಪ್ರಭಾಸ್ ಹೊರತಾಗಿ ಭಾರತದ ಇನ್ಯಾವ ನಟರ ಬಳಿಯೂ ಇಲ್ಲ ಎಂಬುದು ವಿಶೇಷ. ಪ್ರಭಾಸ್ ನಟನೆಯ ‘ಬಾಹುಬಲಿ 2’ ಮೂಲಕ ಶುರುವಾದ ಈ 100 ಕೋಟಿ ಕಲೆಕ್ಷನ್ ಈದ ‘ದಿ ರಾಜಾ ಸಾಬ್’ ವರೆಗೆ ಬಂದಿದೆ. ಸಿನಿಮಾ ಹೇಗೇ ಇರಲಿ, ಪ್ರಭಾಸ್ ಸಿನಿಮಾ ಮೊದಲ ದಿನ 100 ಕೋಟಿ ಗಳಿಸುವುದು ಖಾತ್ರಿ ಎಂಬಂತಾಗಿದೆ.
ಪ್ರಭಾಸ್ ನಟನೆಯ ‘ಬಾಹುಬಲಿ 2’ ‘ಕಲ್ಕಿ 2898 AD’, ‘ಸಲಾರ್’, ‘ಸಾಹೋ’ ಮತ್ತು ‘ಆದಿಪುರುಷ್’ ಚಿತ್ರಗಳು ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿ ಇತಿಹಾಸ ನಿರ್ಮಿಸಿದ್ದವು. ಈಗ ‘ದಿ ರಾಜಾ ಸಾಬ್’ ಈ ಪಟ್ಟಿಗೆ ಸೇರ್ಪಡೆಗೊಳ್ಳುವ ಮೂಲಕ ಪ್ರಭಾಸ್ ಅವರ ಜನಪ್ರಿಯತೆ ಮತ್ತು ಮಾರುಕಟ್ಟೆ ಮೌಲ್ಯ ಎಷ್ಟು ಬೃಹತ್ ಆದುದು ಎಂಬುದು ಇಡೀ ಭಾರತೀಯ ಚಿತ್ರರಂಗಕ್ಕೆ ಮತ್ತೊಮ್ಮೆ ತಿಳಿದಂತಾಗಿದೆ.
ಇದನ್ನೂ ಓದಿ:‘ದಿ ರಾಜಾ ಸಾಬ್’ ಪ್ರೀಮಿಯರ್ ಶೋ: ಚಿತ್ರಮಂದಿರದಲ್ಲಿ ಪ್ರಭಾಸ್ ಫ್ಯಾನ್ಸ್ ಗಲಾಟೆ
ಅಸಲಿಗೆ ‘ಸಾಹೊ’, ‘ಆದಿಪುರುಷ್’ ಸಿನಿಮಾಗಳು ನಿರೀಕ್ಷಿತ ಮಟ್ಟಿಗೆ ಯಶಸ್ವಿ ಆಗಲಿಲ್ಲ. ಆದರೂ ಸಹ ಆ ಸಿನಿಮಾಗಳು ಸಹ ಪ್ರಭಾಸ್ ಇದ್ದರು ಎಂಬ ಏಕೈಕ ಕಾರಣಕ್ಕೆ ಭಾರಿ ಕಲೆಕ್ಷನ್ ಅನ್ನೇ ಮಾಡಿದ್ದವು. ಈಗ ‘ದಿ ರಾಜಾ ಸಾಬ್’ ಸಿನಿಮಾದ ಕತೆಯೂ ಹಾಗೆಯೇ ಆಗಿದೆ. ಕೇವಲ ಪ್ರಭಾಸ್ ಇದ್ದಾರೆಂಬ ಕಾರಣಕ್ಕೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗಿಕೊಂಡು ಸಾಗುತ್ತಿದೆ.
‘ದಿ ರಾಜಾ ಸಾಬ್’ನಲ್ಲಿ ಪ್ರಭಾಸ್ ಹಾರರ್-ಕಾಮಿಡಿ ಸಿನಿಮಾಕ್ಕೆ ಕೈ ಹಾಕಿದ್ದರು. ಬಹಳ ವರ್ಷಗಳ ಬಳಿಕ ಹಾಸ್ಯಕ್ಕೆ ಪ್ರಾಧಾನ್ಯತೆ ಇರುವ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರು. ಆದರೆ ಸಿನಿಮಾದ ಟ್ರೈಲರ್ ಬಿಡುಗಡೆ ಬಳಿಕ ಸಿನಿಮಾದ ವಿಎಫ್ಎಕ್ಸ್ ಸಾಧಾರಣವಾಗಿರುವುದು, ಕ್ಲೀಷೆ ಹಾರರ್ ಸಿನಿಮಾದ ಟ್ರಿಕ್ಸ್ಗಳು ಇರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಈಗಲೂ ಸಹ ‘ದಿ ರಾಜಾ ಸಾಬ್’ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಅಭಿಪ್ರಾಯಗಳಿಲ್ಲ. ಆದರೂ ಸಹ ಪ್ರಭಾಸ್ ಇದ್ದಾರೆಂಬ ಕಾರಣಕ್ಕೆ ಜನ ಸಿನಿಮಾ ವೀಕ್ಷಿಸುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಆಗುತ್ತಲೇ ಇದೆ.
ಪ್ರಭಾಸ್ ಲೈನಪ್ನಲ್ಲಿ ಇದ್ದ ತುಸು ಟೊಳ್ಳು ಸಿನಿಮಾ ಎಂದರೆ ‘ರಾಜಾ ಸಾಬ್’ ಆಗಿತ್ತು. ಆದರೆ ಅದು ಸಹ ಮೊದಲ ದಿನ 100 ಕೋಟಿ ಗಳಿಕೆ ಮಾಡಿದ ಬಳಿಕ ಪ್ರಭಾಸ್ ನಟಿಸಲಿರುವ ಮುಂದಿನ ನಾಲ್ಕು ಸಿನಿಮಾಗಳು ಪಕ್ಕಾ ಬ್ಲಾಕ್ ಬಸ್ಟರ್ ಎಂದು ಈಗಲೇ ಪ್ರಭಾಸ್ ಅಭಿಮಾನಿಗಳು ಲೆಕ್ಕ ಹಾಕಿಬಿಟ್ಟಿದ್ದಾರೆ. ಮುಂಬರುವ ಎರಡು ವರ್ಷಗಳಲ್ಲಿ ಪ್ರಭಾಸ್ ಅವರ ‘ಸ್ಪಿರಿಟ್’, ‘ಕಲ್ಕಿ 2’, ‘ಸಲಾರ್ 2’ ಮತ್ತು ‘ಫೌಜಿ’ ಚಿತ್ರಗಳು ಸಾಲಾಗಿ ಬರಲಿದ್ದು, ಈ ನಾಲ್ಕೂ ಸಿನಿಮಾಗಳು ಪಕ್ಕಾ ಬ್ಲಾಕ್ ಬಸ್ಟರ್ ಆಗುವ ಸಿನಿಮಾಗಳು ಎನ್ನಲಾಗುತ್ತಿವೆ. ಮೊದಲ ದಿನವೇ 100 ಕೋಟಿ ಗಳಿಸುವ ಹತ್ತು ಸಿನಿಮಾಗಳನ್ನು ಹೊಂದಿದ ಏಕೈಕ ಭಾರತೀಯ ನಟ ಎಂಬ ಕೀರ್ತಿಗೆ ಅವರು ಪಾತ್ರರಾಗಲಿರುವುದು ಖಾಯಂ ಎನ್ನುತ್ತಿದ್ದಾರೆ ಅಭಿಮಾನಿಗಳು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ