Dude 2: ಬರಲಿದೆ ‘ಡ್ಯೂಡ್ 2’ ಸಿನಿಮಾ; ಕಥೆ ಮೆಚ್ಚಿದ ನಟ ಪ್ರದೀಪ್ ರಂಗನಾಥನ್

ಬ್ಲಾಕ್ ಬಸ್ಟರ್ ಹಿಟ್ ಆದ ‘ಡ್ಯೂಡ್’ ಸಿನಿಮಾಗೆ ಸೀಕ್ವೆಲ್ ಮಾಡುವ ಬಗ್ಗೆ ನಿರ್ದೇಶಕ ಕೀರ್ತೀಶ್ವರನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರದೀಪ್ ರಂಗನಾಥನ್ ಅವರ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಸಂತಸ ಆಗಿದೆ. ಸದ್ಯಕ್ಕೆ ನಿರ್ದೇಶಕರಿಗೆ ಕಥೆಯ ಐಡಿಯಾ ಬಂದಿದ್ದು, ಪ್ರದೀಪ್ ಜೊತೆ ಅವರು ಚರ್ಚೆ ನಡೆಸಿದ್ದಾರೆ.

Dude 2: ಬರಲಿದೆ ‘ಡ್ಯೂಡ್ 2’ ಸಿನಿಮಾ; ಕಥೆ ಮೆಚ್ಚಿದ ನಟ ಪ್ರದೀಪ್ ರಂಗನಾಥನ್
Dude Movie Poster

Updated on: Jun 10, 2026 | 9:35 PM

ಕಾಲಿವುಡ್‌ನ ಯುವ ಸೆನ್ಸೇಷನ್ ಪ್ರದೀಪ್ ರಂಗನಾಥನ್ (Pradeep Ranganathan) ನಟನೆಯ ‘ಡ್ಯೂಡ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಯಾವುದೇ ದೊಡ್ಡ ನಿರೀಕ್ಷೆಯಿಲ್ಲದೆ ಬಿಡುಗಡೆಯಾಗಿದ್ದ ಈ ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ, ವಿಶ್ವಾದ್ಯಂತ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು. ‘ಡ್ಯೂಡ್’ (Dude) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಕೀರ್ತೀಶ್ವರನ್ ಮೊದಲ ಚಿತ್ರದಲ್ಲೇ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಈಗ ಅವರು ಈ ಸಿನಿಮಾದ ಸೀಕ್ವೆಲ್ (Dude 2) ಬಗ್ಗೆ ಒಂದು ಅಪ್​ಡೇಟ್ ನೀಡಿದ್ದಾರೆ.

ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡಿದ್ದ ಈ ಸಿನಿಮಾ, ಹೊಸ ತಲೆಮಾರಿನ GenZ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸಾಯಿ ಅಭ್ಯಂಕರ್ ಅವರ ಸೂಪರ್ ಹಿಟ್ ಸಂಗೀತ ಕೂಡ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು. ಇದೀಗ ಈ ಸೂಪರ್ ಹಿಟ್ ಸಿನಿಮಾದ ಅಭಿಮಾನಿಗಳಿಗೆ ನಿರ್ದೇಶಕರು ಸಿಹಿ ಸುದ್ದಿ ಕೊಟ್ಟಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಕೀರ್ತೀಶ್ವರನ್, ‘ಡ್ಯೂಡ್ 2’ ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ನಾನು ಈಗಾಗಲೇ ಡ್ಯೂಡ್ 2 ಚಿತ್ರದ ಒಂದು ಸಣ್ಣ ಲೈನ್ ಅಥವಾ ಐಡಿಯಾವನ್ನು ಪ್ರದೀಪ್ ರಂಗನಾಥನ್ ಅವರಿಗೆ ವಿವರಿಸಿದ್ದೇನೆ. ಆ ಕಾನ್ಸೆಪ್ಟ್ ಪ್ರದೀಪ್ ಅವರಿಗೂ ತುಂಬಾ ಇಷ್ಟವಾಗಿದೆ. ಒಂದು ವೇಳೆ ಸೀಕ್ವೆಲ್ ಸೆಟ್ಟೇರಿದರೆ, ಮೊದಲ ಭಾಗದ ಪ್ರಸಿದ್ಧ ‘ಕಮ್ ಆನ್, ಡ್ಯೂಡ್’ ಸನ್ನಿವೇಶದಿಂದಲೇ ಕಥೆ ಮುಂದುವರಿಯಲಿದೆ’ ಎಂದು ಅವರು ಹೇಳಿದ್ದಾರೆ.

ಆದರೆ, ಚಿತ್ರದ ಸೀಕ್ವೆಲ್ ಬಗ್ಗೆ ಕೀರ್ತೀಶ್ವರನ್ ಒಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ‘ಸದ್ಯಕ್ಕೆ ಇದು ಕೇವಲ ಒಂದು ಪ್ರಾಥಮಿಕ ಐಡಿಯಾ ಅಷ್ಟೇ. ಇದು ಇನ್ನೂ ಸಂಪೂರ್ಣವಾಗಿ ಫೈನಲ್ ಆಗಿಲ್ಲ. ಕಥೆ ಪೂರ್ತಿಯಾಗಿ ಸಿದ್ಧಗೊಂಡು, ಮೊದಲ ಭಾಗಕ್ಕಿಂತಲೂ ಅದ್ಭುತವಾಗಿ ಮೂಡಿಬರುತ್ತದೆ ಎಂಬ ಭರವಸೆ ಸಿಕ್ಕರೆ ಮಾತ್ರ ನಾವು ಡ್ಯೂಡ್ 2 ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದೇವೆ. ಸ್ಕ್ರಿಪ್ಟ್ ಆ ಹಂತಕ್ಕೆ ತಲುಪಿದ ನಂತರವೇ ಅಧಿಕೃತ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೃತ್ತಿಜೀವನದ ಆರಂಭದಲ್ಲೇ 100 ಕೋಟಿ ರೂ. ಹ್ಯಾಟ್ರಿಕ್ ಸಾಧಿಸಿದ ಪ್ರದೀಪ್ ರಂಗನಾಥನ್

ಈ ಮೊದಲು ‘ಡ್ಯೂಡ್’ ಸಿನಿಮಾವನ್ನು ಫ್ರಾಂಚೈಸಿ ಅಥವಾ ಸೀಕ್ವೆಲ್ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಿರಲಿಲ್ಲ. ಆದರೆ ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾ ಗಳಿಸಿದ ಅಭೂತಪೂರ್ವ ಯಶಸ್ಸು ಮತ್ತು ಪ್ರದೀಪ್ ರಂಗನಾಥನ್ ಪಾತ್ರಕ್ಕೆ ಸಿಕ್ಕ ಜನಪ್ರಿಯತೆ, ಈಗ ಸೀಕ್ವೆಲ್ ಮಾಡುವಂತೆ ಚಿತ್ರತಂಡವನ್ನು ಪ್ರೇರೇಪಿಸಿದೆ. ಸದ್ಯಕ್ಕೆ ಪ್ರದೀಪ್ ರಂಗನಾಥನ್ ಮತ್ತು ಕೀರ್ತೀಶ್ವರನ್ ಇಬ್ಬರೂ ತಮ್ಮ ಮುಂದಿನ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ನಿರ್ದೇಶಕರು ಈಗಾಗಲೇ ಸೀಕ್ವೆಲ್‌ಗೆ ಬೀಜ ಬಿತ್ತಿರುವುದರಿಂದ, ಮುಂದಿನ ದಿನಗಳಲ್ಲಿ ‘ಡ್ಯೂಡ್ 2’ ಸಿನಿಮಾ ಸೆಟ್ಟೇರುವ ಸಾಧ್ಯತೆಗಳು ದಟ್ಟವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us