
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರದೀಪ್ ರಂಗನಾಥನ್ (Pradeep Ranganathan) ಅವರು ಬಹುಬೇಡಿಕೆಯ ನಟ, ನಿರ್ದೇಶಕನಾಗಿ ಬೆಳೆದು ನಿಂತಿದ್ದಾರೆ. ಅವರ ಖಾತೆಗೆ ಒಂದು ವಿಶೇಷ ದಾಖಲೆ ಸೇರ್ಪಡೆ ಆಗಿದೆ. ಅವರು ನಟಿಸಿದ ಮೊದಲ ಮೂರು ಸಿನಿಮಾಗಳು ತಲಾ 100 ಕೋಟಿ ರೂಪಾಯಿ ಗಳಿಸಿವೆ. ಈ ಮೂಲಕ ಅವರು ಹ್ಯಾಟ್ರಿಕ್ ಸಾಧಿಸಿದ್ದಾರೆ. ಚೊಚ್ಚಲ ಮೂರು ಸಿನಿಮಾಗಳಲ್ಲಿ (ಲವ್ ಟುಡೇ, ಡ್ರ್ಯಾಗನ್, ಡ್ಯೂಡ್) ಸತತ ನೂರು ಕೋಟಿ ರೂಪಾಯಿ ಕಲೆಕ್ಷನ್ (Rs 100 Cr Collection) ಮಾಡಿದ ಭಾರತದ ಮೊದಲ ಹೀರೋ ಎಂಬ ಖ್ಯಾತಿಗೆ ಪ್ರದೀಪ್ ರಂಗನಾಥನ್ ಅವರು ಪಾತ್ರರಾಗಿದ್ದಾರೆ.
ಈ ಸಾಧನೆ ಮಾಡಿದ ಪ್ರದೀಪ್ ರಂಗನಾಥನ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಮೊದಲ 3 ಸಿನಿಮಾಗಳು ಸತತವಾಗಿ ತಲಾ 100 ಕೋಟಿ ರೂಪಾಯಿ ಗಳಿಸಿರುವುದು ಅಸಾಧಾರಣ ಮೈಲಿಗಲ್ಲು. ಪ್ರದೀಪ್ ರಂಗನಾಥನ್ ಅವರು ಅಭಿನಯಿಸಿದ ‘ಲವ್ ಟುಡೇ’, ‘ಡ್ರ್ಯಾಗನ್’ ಹಾಗೂ ‘ಡ್ಯೂಡ್’ ಸಿನಿಮಾಗಳು ವಿಶಿಷ್ಠ ಕಥಾಹಂದರ ಕಾರಣದಿಂದ ಜನಮನ ಗೆದ್ದಿವೆ.
ಹ್ಯಾಟ್ರಿಕ್ 100 ಕೋಟಿ ಸಾಧನೆಯಿಂದ ಪ್ರದೀಪ್ ರಂಗನಾಥನ್ ಅವರು ಸೌತ್ ಸಿನಿಮಾ ರಂಗದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅವರಿಗೆ ಇರುವ ಬೇಡಿಕೆ ಡಬಲ್ ಆಗಿದೆ. ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ. ಇತ್ತೀಚೆಗೆ ಪ್ರದೀಪ್ ರಂಗನಾಥನ್ ಅಭಿನಯದ ‘ಡ್ಯೂಡ್’ ಸಿನಿಮಾ ಬಿಡುಗಡೆ ಆಯಿತು. ಕೀರ್ತಿಸ್ವರನ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಬಂಡವಾಳ ಹೂಡಿದೆ. ಬಿಡುಗಡೆಯಾದ ಮೊದಲ ವಾರದಲ್ಲಿಯೇ ಜಾಗತಿಕವಾಗಿ 100 ಕೋಟಿ ರೂ. ಗಡಿ ದಾಟಿದೆ.
ದೀಪಾವಳಿ ಹಬ್ಬದ ವಾರಾಂತ್ಯದಲ್ಲಿ ತೆರೆಕಂಡ ‘ಡ್ಯೂಡ್’ ಸಿನಿಮಾ ತಮಿಳುನಾಡಿನಲ್ಲಿ ಬಾಕ್ಸ್ ಆಫೀಸ್ ಪ್ರಾಬಲ್ಯ ಸಾಧಿಸಿತು. ಅಲ್ಲದೇ ತೆಲಂಗಾಣ, ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಬಗ್ಗೆ ಪ್ರದೀಪ್ ರಂಗನಾಥನ್ ಅವರು ಪ್ರತಿಕ್ರಿಯಿಸಿದ್ದಾರೆ. ತಮ್ಮ ಈ ಗೆಲುವಿಗೆ ಕಾರಣವಾದ ಅಭಿಮಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ಪ್ರದೀಪ್ ರಂಗನಾಥನ್ ಜೊತೆ ಸಿನಿಮಾ ಮಾಡ್ತಾರಾ ದಳಪತಿ ವಿಜಯ್? ಹೀಗೆ ಹೇಳಿದ್ದಾರೆ ಲವ್ ಟುಡೇ ನಿರ್ದೇಶಕರು
ಹೀರೋ ಆಗುವುದಕ್ಕೂ ಮುನ್ನ ಪ್ರದೀಪ್ ರಂಗನಾಥನ್ ಅವರು ನಿರ್ದೇಶಕನಾಗಿ ಯಶಸ್ಸು ಕಂಡಿದ್ದರು. ‘ಕೋಮಾಲಿ’ ಸಿನಿಮಾದಿಂದ ಅವರು ನಿರ್ದೇಶಕನಾಗಿ ಜರ್ನಿ ಆರಂಭಿಸಿದರು. ಆ ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರಿತು. ಚೊಚ್ಚಲ ನಿರ್ದೇಶನದಲ್ಲಿಯೇ ಅವರು ತಮ್ಮ ಪ್ರತಿಭೆ ಸಾಬೀತು ಮಾಡಿದರು. ಪ್ರದೀಪ್ ಅವರು ಹೀರೋ ಆಗಿ ನಟಿಸಿದ ಚೊಚ್ಚಲ ಸಿನಿಮಾ ‘ಲವ್ ಟುಡೇ’ ಹಿಂದಿಗೂ ರಿಮೇಕ್ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.