
ಕಾಲಿವುಡ್‌ನ ಯುವ ಹಾಗೂ ಪ್ರತಿಭಾವಂತ ನಟ-ನಿರ್ದೇಶಕ ಪ್ರದೀಪ್ ರಂಗನಾಥನ್ (Pradeep Ranganathan) ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದ್ದಾರೆ. ‘ಪಿಆರ್ ಶೋ’ (PR Show) ಎಂದು ಹೆಸರಿಡಲಾದ ಈ ಬ್ಯಾನರ್ ಅಡಿಯಲ್ಲಿ ತಮ್ಮ ನೂತನ ಸಿನಿಮಾವನ್ನು ಅವರು ಅನೌನ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ಒಬ್ಬರಲ್ಲ ಇಬ್ಬರಲ್ಲ, ಬರೋಬ್ಬರಿ 6 ಜನ ನಿರ್ದೇಶಕರು ಆ್ಯಕ್ಷನ್-ಕಟ್ ಹೇಳುತ್ತಿರುವುದು ಇಡೀ ಸೌತ್ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಸೋಮವಾರ (ಜುಲೈ 6) ಪ್ರದೀಪ್ ರಂಗನಾಥನ್ ಅವರು ಬಿಡುಗಡೆ ಮಾಡಿರುವ 2 ನಿಮಿಷಗಳ ವಿಶೇಷ ಪ್ರೋಮೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾತ್ಕಾಲಿಕವಾಗಿ ‘PRS01’ ಎಂದು ಹೆಸರಿಡಲಾದ ಈ ಚಿತ್ರದಲ್ಲಿ ಪ್ರದೀಪ್ ರಂಗನಾಥನ್ ಅವರೊಂದಿಗೆ ‘ಪ್ರೇಮಲು’ ಖ್ಯಾತಿಯ ಮಮಿತಾ ಬೈಜು ಮತ್ತು ಅಶ್ವತ್ ಮಾರಿಮುತ್ತು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಹೊಸ ನಟಿ ಅನಾಮಿಕಾ ಮಾಹಿ, ಸ್ವಾಸಿಕಾ ಮತ್ತು ತೆಲುಗು ನಟ ಶಿವಾಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಈ ಚಿತ್ರವನ್ನು ನಿರ್ದೇಶಿಸುತ್ತಿರುವ ಆರು ಜನ ಹೊಸ ನಿರ್ದೇಶಕರ ತಂಡಕ್ಕೆ ಪ್ರದೀಪ್ ‘ದಿ ಆಲ್ಫಾ ಯೂನಿಟ್’ ಎಂದು ಹೆಸರಿಟ್ಟಿದ್ದಾರೆ. ವಿಶಾಲ್ ಟಿಆರ್, ಯಶ್ ವಿ, ನರೇನ್, ಚಾಣಕ್ಯನ್ ಆರ್, ಧನುಷ್ ಕುಮಾರ್ ಮತ್ತು ಇಳಂಪರಿತಿ ಈ ಚಿತ್ರದ ನಿರ್ದೇಶಕರು. ಇವರಲ್ಲಿ ನರೇನ್, ವಿಶಾಲ್ ಮತ್ತು ಇಳಂಪರಿತಿ ಈ ಹಿಂದೆ ಪ್ರದೀಪ್ ಅವರೊಂದಿಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಚಾಣಕ್ಯನ್ ಅವರು ಅಶ್ವತ್ ತಂಡದಲ್ಲಿದ್ದರು. ಧನುಷ್ ಶಾರ್ಟ್ ಫಿಲ್ಮ್ ಮೇಕರ್ ಆಗಿದ್ದರೆ, ಯಶ್ 3D ಆರ್ಟಿಸ್ಟ್ ಆಗಿದ್ದಾರೆ. ಹೊಸಬರ ಈ ವಿಭಿನ್ನ ಪ್ರಯತ್ನಕ್ಕೆ ಪ್ರದೀಪ್ ಸಾಥ್ ನೀಡಿದ್ದಾರೆ.
ಈ ಚಿತ್ರಕ್ಕೆ ಸ್ವತಃ ಪ್ರದೀಪ್ ರಂಗನಾಥನ್ ಅವರೇ ಕಥೆ ಬರೆದು ಬಂಡವಾಳ ಹೂಡುತ್ತಿದ್ದಾರೆ. ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರು ಈ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದು, ಚಿತ್ರದ ಪ್ರೋಮೋ ಜೊತೆಗೆ ‘ಆನೆ ವಾಲಾ ಸ್ಟಾರ್’ ಎಂಬ ವಿಶೇಷ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: Dude 2: ಬರಲಿದೆ ‘ಡ್ಯೂಡ್ 2’ ಸಿನಿಮಾ; ಕಥೆ ಮೆಚ್ಚಿದ ನಟ ಪ್ರದೀಪ್ ರಂಗನಾಥನ್
ತಮಿಳು ಮಾತ್ರವಲ್ಲದೆ ಈ ವಿಭಿನ್ನ ಪ್ರಯೋಗದ ಚಿತ್ರವನ್ನು ಕನ್ನಡ ಸೇರಿದಂತೆ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಮಾಸ್ ಆ್ಯಕ್ಷನ್ ಮತ್ತು ಸಸ್ಪೆನ್ಸ್ ಎಲಿಮೆಂಟ್‌ಗಳಿರುವ ಈ ಚಿತ್ರದ ಗ್ಲಿಂಪ್ಸ್ ಸದ್ಯ ಸಿನಿರಂಗದಲ್ಲಿ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.