
ಪ್ರಕಾಶ್ ರೈ (Prakash Raj) ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು. ರಾಜಕೀಯ ವಿಷಯಗಳ ಬಗ್ಗೆ ‘ಜಸ್ಟ್ ಆಸ್ಕಿಂಗ್’ ಹ್ಯಾಷ್ ಟ್ಯಾಗ್ ಅಡಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬಹುತೇಕ, ಬಿಜೆಪಿಯ ಸಿದ್ಧಾಂತಗಳನ್ನು ವಿರೋಧಿಸಿ ಟ್ವೀಟ್ಗಳನ್ನು ಮಾಡುತ್ತಿರುತ್ತಾರೆ. ಕಳೆದ ಒಂದೆರಡು ದಿನಗಳಿಂದ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಸರಣಿ ಟ್ವೀಟ್ಗಳನ್ನು ಮಾಡುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅವರ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, ‘ಈ ಬೆದರಿಕೆ ಎಲ್ಲ ಬೇಡ’ ಎಂದು ಗಡುಸಾಗಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಅವರ ರ್ಯಾಲಿಗೆ ಅನುಮತಿ ನಿರಾಕರಿಸಲಾಗಿತ್ತು. ಇದನ್ನು ತೀವ್ರವಾಗಿ ಖಂಡಿಸಿದ್ದ ಪವನ್ ಕಲ್ಯಾಣ್, ‘ತೆಲಂಗಾಣ ಯಾರಪ್ಪನ ಆಸ್ತಿಯಲ್ಲ’ ಎಂದು ಗುಡುಗಿದ್ದರು. ಪವನ್ ಅವರ ಆ ಭಾಷಣದ ಬಗ್ಗೆ ಪರ-ವಿರೋಧ ಚರ್ಚೆಗಳು ಚಾಲ್ತಿಯಲ್ಲಿದ್ದವು. ಈ ಸಂದರ್ಭದಲ್ಲಿ ಪ್ರಕಾಶ್ ರೈ, ಪವನ್ ಕಲ್ಯಾಣ್ ಕಾಲೆಳೆದು ಟ್ವೀಟ್ ಮಾಡಿದ್ದರು. ಆ ಟ್ವೀಟ್ಗೆ ವಿರುದ್ಧವಾಗಿ ಪವನ್ ಕಲ್ಯಾಣ್ ಆಪ್ತ, ಪ್ರಕಾಶ್ ರೈ ಕುರಿತು ಏಕವನಚದಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೆ ಇದೀಗ ಪ್ರಕಾಶ್ ರೈ ಅವರು ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅವರ ಟ್ವೀಟ್ಗೆ ಖಾರವಾಗಿ ಪ್ರತಿ ಟ್ವೀಟ್ ಮಾಡಿದ್ದಾರೆ.
ಪವನ್ ಕಲ್ಯಾಣ್ ಅವರ ಚಿತ್ರ ಹಂಚಿಕೊಂಡಿದ್ದ ನಾಗಬಾಬು ‘ನಾಯಕನ ಮಾತು ಅಂತಿಮ. ಯಾರೂ ಅವನ ದಾರಿಯಲ್ಲಿ ಸಮಸ್ಯೆಗಳನ್ನು ನೋಡಿಲ್ಲ, ನಾಯಕನಿಗೆ ಮಾತ್ರ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ತಿಳಿದಿದೆ. ನಿಮ್ಮ ಅನುಮಾನಗಳನ್ನು ಮುಚ್ಚಿ, ನಿಮ್ಮ ನಾಲಿಗೆಯನ್ನು ಮೌನಗೊಳಿಸಿ ಮತ್ತು ಪ್ರಶ್ನೆಗಳನ್ನು ಮಾಡದೆ ನಾಯಕನನ್ನು ಅನುಸರಿಸಿ’ ಎಂದು ಬರೆದಿದ್ದರು.
ಇದನ್ನೂ ಓದಿ:ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು?
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, ‘ಅನುಮಾನಗಳನ್ನು ಸುಮ್ಮನಾಗಿಸಿ, ನಾಲಗಿಯನ್ನು ಮೌನವಾಗಿಸಿ, ಪ್ರಶ್ನೆಗಳನ್ನು ಕೇಳಬೇಡಿ’ ಎಂಬ ನಿಮ್ಮ ಮಾತಿನ ಅರ್ಥವೇನು? ನಾವೇನು ಕುದುರೆಗಳಾ? ನೀವು ಹೇಳಿದಂತೆ ಕೇಳಿಕೊಂಡು ಇರಲು? ಈ ಬೆದರಿಕೆಗಳೆಲ್ಲ ಬೇಡ. ಪ್ರಶ್ನೆ ಮಾಡುವುದು ನಮ್ಮ ಹಕ್ಕು. ಯಾವ ನಾಯಕನೇ ಆದರು, ಜನರಿಗೆ ಉತ್ತರ ಕೊಡುವ ಜವಾಬ್ದಾರಿ ಆತನ ಮೇಲೆ ಇರುತ್ತದೆ. ಅರ್ಥ ಆಯಿತೆ?’ ಎಂದು ಪ್ರಕಾಶ್ ರೈ ಪ್ರಶ್ನೆ ಮಾಡಿದ್ದಾರೆ.
ನಾಗಬಾಬು ಅವರು ಪ್ರಕಾಶ್ ರೈ ಅವರ ಜನಸೇನಾ ಪಕ್ಷದ ಪ್ರಮುಖ ಮುಖಂಡರುಗಳಲ್ಲಿ ಒಬ್ಬರು. ಪವನ್ ಕಲ್ಯಾಣ್ ಅವರ ಸ್ವಂತ ಅಣ್ಣ ಸಹ. ಪವನ್ ಕಲ್ಯಾಣ್ ಅವರ ರಾಜಕೀಯ ಜರ್ನಿಯಲ್ಲಿ ನಾಗಬಾಬು ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ನಾಗಬಾಬು ಮತ್ತು ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಮೆಗಾ ಸಹೋದರರು ಎಂದೇ ಖ್ಯಾತರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ