ನಟ ವಿಜಯ್ ದೇವರಕೊಂಡ (Vijay Deverakonda) ಅವರು ಬಹುಬೇಡಿಕೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗೆ ಜನಪ್ರಿಯತೆ ಸಿಕ್ಕಿದೆ. ‘ಲೈಗರ್’ (Liger Movie) ಸಿನಿಮಾ ಬಿಡುಗಡೆಗೂ ಮುನ್ನವೇ ಅವರು ದೇಶಾದ್ಯಂತ ಇರುವ ಅಭಿಮಾನಿಗಳ ಪ್ರೀತಿಗೆ ಶರಣಾಗಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ ಭಾರಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಈ ನಡುವೆ ಒಂದು ಫೋಟೋ ವೈರಲ್ ಆಗಿದೆ. ಆ ಫೋಟೋದಲ್ಲಿ ‘ಕೆಜಿಎಫ್: ಚಾಪ್ಟರ್ 2’ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಕಾಣಿಸಿಕೊಂಡಿದ್ದಾರೆ. ಅದನ್ನು ನೋಡಿದ ಎಲ್ಲರಿಗೂ ಅಚ್ಚರಿ ಮೂಡಿದೆ. ಪ್ರಶಾಂತ್ ನೀಲ್ ಮತ್ತು ವಿಜಯ್ ದೇವರಕೊಂಡ ಒಟ್ಟಾಗಿ ಸಿನಿಮಾ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 2’ ಯಶಸ್ಸಿನ ನಂತರ ಬಹುಬೇಡಿಕೆಯ ನಿರ್ದೇಶಕನಾಗಿದ್ದಾರೆ. ಅವರೀಗ ‘ಸಲಾರ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದಾದ ಬಳಿಕ ಜೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾಗೆ ಅವರು ನಿರ್ದೇಶನ ಮಾಡಲಿದ್ದಾರೆ. ಆ ನಂತರ ಏನಾದರೂ ಅವರು ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆಯೇ ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ.
‘ಲೈಗರ್’ ಸಿನಿಮಾ ಇಂದು (ಆಗಸ್ಟ್ 25) ಅದ್ದೂರಿಯಾಗಿ ರಿಲೀಸ್ ಆಗಿದೆ. ಬಿಡುಗಡೆಗೂ ಮುನ್ನ ತಂಡ ಪಾರ್ಟಿ ಮಾಡಿದೆ. ಈ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ, ನಿರ್ದೇಶಕ ಪುರಿ ಜಗನ್ನಾಥ್, ಚಾರ್ಮಿ ಕೌರ್, ನಟಿ ಅನನ್ಯಾ ಪಾಂಡೆ ಸೇರಿದಂತೆ ತಂಡದ ಹಲವರು ಭಾಗಿ ಆಗಿದ್ದಾರೆ. ಅವರೆಲ್ಲರ ಜೊತೆ ಪ್ರಶಾಂತ್ ನೀಲ್ ಕೂಡ ಸೇರಿಕೊಂಡಿದ್ದಾರೆ. ‘ಲೈಗರ್’ ತಂಡಕ್ಕೆ ಸಂಬಂಧವೇ ಇಲ್ಲದ ಪ್ರಶಾಂತ್ ನೀಲ್ ಈ ಪಾರ್ಟಿಯಲ್ಲಿ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಈಗ ಉತ್ತರ ಸಿಗಬೇಕಿದೆ.
ಪ್ರಶಾಂತ್ ನೀಲ್ ಅವರು ಹೆಚ್ಚಾಗಿ ಟಾಲಿವುಡ್ ವಲಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಲ್ಲಿನ ಸ್ಟಾರ್ ನಟ-ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರ ಸ್ನೇಹ ಹೆಚ್ಚುತ್ತಿದೆ. ರಾಮ್ ಚರಣ್, ಜೂನಿಯರ್ ಎನ್ಟಿಆರ್ ಸೇರಿದಂತೆ ಅನೇಕರ ಜೊತೆ ಅವರಿಗೆ ಆಪ್ತತೆ ಬೆಳೆದಿದೆ. ಈಗ ಅವರು ವಿಜಯ್ ದೇವರಕೊಂಡ ಪಕ್ಕದಲ್ಲಿ ನಿಂತು ಪೋಸ್ ನೀಡಿರುವುದು ಒಂದಷ್ಟು ಗುಮಾನಿಗೆ ಕಾರಣ ಆಗಿದೆ.
ಒಂದು ವೇಳೆ ಪ್ರಶಾಂತ್ ನೀಲ್ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ಸಿನಿಮಾ ಮಾಡಿದ್ದೇ ಹೌದಾದರೆ ಅಭಿಮಾನಿಗಳ ಪಾಲಿಗೆ ಹಬ್ಬವಾಗಲಿದೆ. ಸದ್ಯಕ್ಕೆ ಎಲ್ಲರ ಗಮನ ‘ಲೈಗರ್’ ಸಿನಿಮಾ ಮೇಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗಿದೆ. ಆಗಸ್ಟ್ 25ರ ಸಂಜೆಯಿಂದ ಹಿಂದಿ ವರ್ಷನ್ ಪ್ರದರ್ಶನ ಶುರುವಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Thu, 25 August 22