ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಬಿಡುಗಡೆ ಆಗಿ ವರ್ಷವಾಗಿದೆ. ‘ರಾಧೆ-ಶ್ಯಾಮ್‘, ‘ಆದಿಪುರುಷ್‘ ಸಿನಿಮಾ ಮೂಲಕ ಸೋಲು ಕಂಡಿದ್ದ ಪ್ರಭಾಸ್ಗೆ ಭರ್ಜರಿ ಯಶಸ್ಸು ತಂದುಕೊಟ್ಟ ಸಿನಿಮಾ ‘ಸಲಾರ್’. ವಿಶ್ವದಾದ್ಯಂತ ಸುಮಾರು 500 ಕೋಟಿ ಹಣವನ್ನು ಈ ಸಿನಿಮಾ ಬಾಚಿತ್ತು. ಆದರೆ ಸಿನಿಮಾ ಬಿಡುಗಡೆ ಆಗಿ ಕೆಲ ತಿಂಗಳ ನಂತರ ಪ್ರಶಾಂತ್ ನೀಲ್-ಪ್ರಭಾಸ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಪ್ರಶಾಂತ್ ನೀಲ್, ಸಂದರ್ಶನವೊಂದರಲ್ಲಿ ‘ಸಲಾರ್’ ಸಿನಿಮಾ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸಲಾರ್’ ಸಿನಿಮಾ ಬಗ್ಗೆ ಅದು ನೀಡಿದ ಬಾಕ್ಸ್ ಆಫೀಸ್ ಪ್ರದರ್ಶನದ ಬಗ್ಗೆ ಮಾತನಾಡಿರುವ ಪ್ರಶಾಂತ್ ನೀಲ್, ‘ಸಲಾರ್’ ಸಿನಿಮಾ ಬಗ್ಗೆ ನನಗೆ ಪೂರ್ಣ ಸಂತೋಷ ಇಲ್ಲ. ನಾನು ‘ಸಲಾರ್’ ಮೊದಲ ಭಾಗಕ್ಕೆ ಹಾಕಿದ ಶ್ರಮದ ಬಗ್ಗೆ ನನಗೆ ಅಸಂತೃಪ್ತಿ ಇದೆ. ‘ಕೆಜಿಎಫ್ 2’ ಅಂಥಹಾ ಸಿನಿಮಾ ಮಾಡಿಬಂದು ನಾನು ಇನ್ನಷ್ಟು ಅತ್ಯುತ್ತಮ ಗುಣಮಟ್ಟದ ಸಿನಿಮಾ ಮಾಡಬೇಕಿತ್ತು’ ಎಂದಿದ್ದಾರೆ ಪ್ರಶಾಂತ್ ನೀಲ್.
ಮುಂದುವರೆದು, ‘ಇದೇ ಕಾರಣಕ್ಕೆ ‘ಸಲಾರ್ 2’ ಸಿನಿಮಾಕ್ಕೆ ನಾನು ಹೆಚ್ಚಿನ ಪರಿಶ್ರಮ ಹಾಕುತ್ತಿದ್ದೇನೆ. ‘ಸಲಾರ್ 2’ ಗೆ ನಾನು ಮಾಡಿಕೊಂಡಿರುವ ಕತೆ ನನ್ನ ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿಯೇ ಅತ್ಯುತ್ತಮವಾದುದು. ‘ಸಲಾರ್ 2’ ಸಿನಿಮಾ ನನ್ನ ಈವರೆಗಿನ ಸಿನಿಮಾಗಳಲ್ಲಿಯೇ ಅತ್ಯುತ್ತಮ ಸಿನಿಮಾ ಆಗಿರಲಿದೆ. ಪ್ರೇಕ್ಷಕರು ಏನು ನಿರೀಕ್ಷೆ ಮಾಡುತ್ತಿದ್ದಾರೋ ಅದಕ್ಕಿಂತಲೂ ಹೆಚ್ಚಿನದನ್ನು ನಾನು ನೀಡಲಿದ್ದೇನೆ ಈ ಬಗ್ಗೆ ನನಗೆ ಸಂಪೂರ್ಣ ಭರವಸೆ ಇದೆ. ನಾನು ಸಂಪೂರ್ಣ ಭರವಸೆ ಯಾವುದರ ಮೇಲೂ ಇಡುವುದಿಲ್ಲ. ಆದರೆ ‘ಸಲಾರ್ 2’ ಬಗ್ಗೆ ಬಹಳ ಭರವಸೆ ಇದೆ’ ಎಂದಿದ್ದಾರೆ ನೀಲ್.
ಇದನ್ನೂ ಓದಿ:‘ಬಘೀರ’ ಸಿನಿಮಾ ನೋಡಿ ಪ್ರಶಾಂತ್ ನೀಲ್ ಹೇಳಿದ್ದೇನು?
‘ಸಲಾರ್’ ಸಿನಿಮಾ 2023ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ‘ಸಲಾರ್’ ಸಿನಿಮಾ ಪ್ರಶಾಂತ್ ನೀಲ್ ಅವರ ಮೊದಲ ಸಿನಿಮಾ ‘ಉಗ್ರಂ’ನ ರೀಮೇಕ್ ಆಗಿತ್ತು. ಆದರೆ ‘ಸಲಾರ್ 2’ ಸಿನಿಮಾಕ್ಕೆ ಭಿನ್ನ ಕತೆಯನ್ನು ನೀಲ್ ಮಾಡಿಕೊಂಡಿದ್ದಾರಂತೆ. ‘ಸಲಾರ್ 2’ ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದ್ದು, ಸಿನಿಮಾವನ್ನು ಹೊಂಬಾಳೆಯೇ ನಿರ್ಮಾಣ ಮಾಡಲಿದೆ. ಪ್ರಭಾಸ್ ಪ್ರಸ್ತುತ ‘ರಾಜಾ ಸಾಬ್’ ಹಾಗೂ ರಘು ಹನುಪುಡಿ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಮತ್ತು ‘ಸಲಾರ್ 2’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ