
‘ಪ್ರೇಮದ ಊರಲಿ’ ಕನ್ನಡ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಸೃಷ್ಟಿಸಿದೆ. ಎರಡು ವಾರದ ಹಿಂದೆ ಕೆಲವೇ ಸೀಮಿತ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಈ ಸಿನಿಮಾ ಈಗ ರಾಜ್ಯದಾದ್ಯಂತ 500 ಕ್ಕೂ ಹೆಚ್ಚು ಶೋಗಳನ್ನು ಪಡೆದುಕೊಂಡಿದ್ದು, ಬಹುತೇಕ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಅದ್ಯಾವ ಮಟ್ಟಿಗೆ ಕ್ರೇಜ್ ಹುಟ್ಟಿಸಿದೆಯೆಂದರೆ ಕನ್ನಡದ ಈ ಸಿನಿಮಾಕ್ಕೆ ಹೊರ ರಾಜ್ಯಗಳಲ್ಲಿಯೂ ಬೇಡಿಕೆ ಹೆಚ್ಚಿಸಿಕೊಂಡಿದೆ. ಈಗಾಗಲೇ ‘ಪ್ರೇಮದ ಊರಲಿ’ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗಿದ್ದು, ಇದೀಗ ಪ್ಯಾನ್ ಇಂಡಿಯಾ ರಿಲೀಸ್ಗೆ ರೆಡಿ ಆಗಿದೆ.
‘ಪ್ರೇಮದ ಊರಲಿ’ ಸಿನಿಮಾ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ನಿನ್ನೆಯಷ್ಟೆ (ಅಕ್ಟೋಬರ್ 2) ತೆಲುಗು ರಾಜ್ಯಗಳಲ್ಲಿ ರಿಲೀಸ್ ಆಗಿದ್ದು, ಅಲ್ಲೂ ಸಹ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಇದೀಗ ಕೆಲ ದೊಡ್ಡ ವಿತರಕರರು ಸಿನಿಮಾದ ಬೆಂಬಲಕ್ಕೆ ನಿಂತಿದ್ದು, ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಮಾಡಲಾಗುತ್ತಿದೆ.
ಮೊದಲಿಗೆ ಪ್ರಶಾಂತ್ ಎಂಬುವರು ಸಿನಿಮಾದ ವಿತರಣೆ ಮಾಡಿದ್ದರು. ಬಳಿಕ ರಂಗಾಯಣ ರಘು ಅವರ ನೆರವಿನಿಂದ ಜಯಣ್ಣ ಕಂಬೈನ್ಸ್ ಅವರು ಸಿನಿಮಾದ ವಿತರಣೆಗೆ ಕೈಹಾಕಿದ್ದು, ಸಿನಿಮಾ ರಾಜ್ಯದ ಮೂಲೆ-ಮೂಲೆಗೂ ತಲುಪುವಂತೆ ಮಾಡಿದ್ದಾರೆ. ಕೆಆರ್ಜಿ ಸಹ ಇವರೊಟ್ಟಿಗೆ ಕೈ ಜೋಡಿಸಿದ್ದಾರೆ. ಇನ್ನು ಸಿನಿಮಾವನ್ನು ಈಗಾಗಲೇ ತೆಲುಗಿನಲ್ಲಿ ರಿಲೀಸ್ ಮಾಡಲಾಗಿದ್ದು, ಹಿಂದಿಯಲ್ಲಿಯೂ ಸಿನಿಮಾ ರಿಲೀಸ್ ಮಾಡಲು ಯೋಜನೆ ಚಾಲ್ತಿಯಲ್ಲಿದೆ.
ಇದನ್ನೂ ಓದಿ:ಸ್ಯಾಂಡಿ ಸ್ವಾರ್ಥಿ; ನೇರವಾಗಿ ಹೇಳಿದ ಕಿಚ್ಚ ಸುದೀಪ್
ಕನ್ನಡದ ‘ಕೆಜಿಎಫ್’, ತೆಲುಗಿನ ‘ಪುಷ್ಪ’ ಸೇರಿದಂತೆ ದಕ್ಷಿಣದ ಹಲವು ದೊಡ್ಡ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ವಿತರಣೆ ಮಾಡಿರುವ ಅನಿಲ್ ತಡಾನಿ ಅವರ ನೆರವಿನಿಂದ ಉತ್ತರ ಭಾರತದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಲಘು-ಬಗೆಯಿಂದ ಸಿನಿಮಾ ಅನ್ನು ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿಸುವ ಕಾರ್ಯ ಚಾಲ್ತಿಯಲ್ಲಿದೆ. ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಸಹ ಸಿನಿಮಾ ಅನ್ನು ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ಸಹ ಇದೇ ರೀತಿ ಮೊದಲಿಗೆ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆ ಬಳಿಕ ಸಿನಿಮಾದ ಭರ್ಜರಿ ಪ್ರದರ್ಶನ ಕಂಡು ಬೇರೆ ಭಾಷೆಗಳವರೇ ಒತ್ತಾಯಿಸಿ ಸಿನಿಮಾವನ್ನು ಡಬ್ ಮಾಡಿಸಿ ತಮ್ಮ ರಾಜ್ಯಗಳಲ್ಲಿ ರಿಲೀಸ್ ಮಾಡಿದರು. ಆ ಬಳಿಕ ನಡೆದಿದ್ದು ಇತಿಹಾಸ. ಇದೀಗ ‘ಪ್ರೇಮದ ಊರಲಿ‘ ಸಿನಿಮಾ ಸಹ ಇದೇ ರೀತಿ ಮ್ಯಾಜಿಕ್ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ