ಮಹೇಶ್ ಬಾಬು, ಪವನ್ ಕಲ್ಯಾಣ್ ಇಂದಾಗಿ ಒಂದೇ ವರ್ಷದಲ್ಲಿ 25 ಕೋಟಿ ನಷ್ಟವಾಗಿತ್ತು: ನಿರ್ಮಾಪಕ ದಿಲ್ ರಾಜು

|

Updated on: Apr 08, 2023 | 6:34 PM

ಯಶ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿರುವ ಖ್ಯಾತ ನಿರ್ಮಾಪಕ ದಿಲ್ ರಾಜು, ತಾವು ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಅವರಿಂದಾಗಿ ಒಂದೇ ವರ್ಷದಲ್ಲಿ 25 ಕೋಟಿ ಹಣ ಕಳೆದುಕೊಂಡ ಬಗ್ಗೆ ಮಾತನಾಡಿದ್ದಾರೆ.

ಮಹೇಶ್ ಬಾಬು, ಪವನ್ ಕಲ್ಯಾಣ್ ಇಂದಾಗಿ ಒಂದೇ ವರ್ಷದಲ್ಲಿ 25 ಕೋಟಿ ನಷ್ಟವಾಗಿತ್ತು: ನಿರ್ಮಾಪಕ ದಿಲ್ ರಾಜು
ಪವನ್ ಕಲ್ಯಾಣ್-ದಿಲ್ ರಾಜು-ಮಹೇಶ್ ಬಾಬು
Follow us on

ಮಹೇಶ್ ಬಾಬು (Mahesh Babu) ಹಾಗೂ ಪವನ್ ಕಲ್ಯಾಣ್ (Pawan Kalyan) ಇಬ್ಬರೂ ಭಾರತದ ಸ್ಟಾರ್ ನಟರುಗಳಲ್ಲಿ ಗುರುತಿಸಿಕೊಳ್ಳುವವರು. ಇವರ ಸಿನಿಮಾಗಳು ಬಿಡುಗಡೆ ದಿನವೇ 20-30 ಕೋಟಿ ಕಲೆಕ್ಷನ್ ಮಾಡುತ್ತವೆ. ಆದರೆ ತೆಲುಗು ಚಿತ್ರರಂಗದ ದೊಡ್ಡ ಬಜೆಟ್ ನಿರ್ಮಾಪಕ ದಿಲ್ ರಾಜು, ತಾವು ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಅವರಿಂದಾಗಿ ಒಂದೇ ವರ್ಷದಲ್ಲಿ 25 ಕೋಟಿ ಹಣ ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ, ತಮಗೆ ಹೆಚ್ಚು ಹಣ ಗಳಿಸಿಕೊಟ್ಟ ಸಿನಿಮಾ ಯಾವುದೆಂದು ಸಹ ದಿಲ್ ರಾಜು (Dil Raju) ಹೇಳಿದ್ದಾರೆ.

ಸಿನಿಮಾ ವಿತರಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ದಿಲ್ ರಾಜು, ನಿತಿನ್ ನಟನೆಯ ದಿಲ್ ಸಿನಿಮಾದ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದರು. ಮೊದಲ ಸಿನಿಮಾ ಹಿಟ್ ಆದ ಬಳಿಕ ಸಾಲು-ಸಾಲು ಸಿನಿಮಾಗಳನ್ನು ಮಾಡಿದ ದಿಲ್ ರಾಜು ಈಗ ದಕ್ಷಿಣ ಭಾರತದ ದೊಡ್ಡ ಬಜೆಟ್​ನ ಕೆಲವೇ ನಿರ್ಮಾಪಕರಲ್ಲಿ ಒಬ್ಬರು. ಅವರ ಫಿಲ್ಮೋಗ್ರಫಿಯಲ್ಲಿ ಸೋತ ಸಿನಿಮಾಗಳ ಸಂಖ್ಯೆ ಅತ್ಯಂತ ವಿರಳ.

ಸಮಂತಾ ನಟನೆಯ ಶಾಕುಂತಲಂ ಸಿನಿಮಾಕ್ಕೆ ಸಹ ನಿರ್ಮಾಪಕರಾಗಿರುವ ದಿಲ್ ರಾಜು, ಸಿನಿಮಾದ ಪ್ರಚಾರಾರ್ಥ ಸಂದರ್ಶನವೊಂದರಲ್ಲಿ ಭಾಗವಹಿಸಿ ತಮಗೆ ಒಂದೇ ವರ್ಷದಲ್ಲಿ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಅವರಿಂದ 25 ಕೋಟಿ ನಷ್ಟವಾದ ವಿಚಾರ ಬಹಿರಂಗಪಡಿಸಿದ್ದಾರೆ. ”ನಾನು ಸಿನಿಮಾ ವಿತರಣೆಯಲ್ಲೇ ಮುಂದುವರೆದಿದ್ದರೆ ಇಷ್ಟು ದೂರ ಸಾಗಿಬರಲಾಗುತ್ತಿರಲಿಲ್ಲ ಎಂದಿರುವ ದಿಲ್ ರಾಜು, ನಿರ್ಮಾಪಕನಾಗಿಯೂ ಒಮ್ಮೆ ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾಗಿ ಹೇಳಿಕೊಂಡಿದ್ದಾರೆ.

ಮಹೇಶ್ ಬಾಬು ಜೊತೆಗೆ ‘ಸ್ಪೈಡರ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದೆ ಆ ಸಿನಿಮಾವನ್ನು ಎ.ಆರ್.ಮುರುಗದಾಸ್ ನಿರ್ದೇಶನ ಮಾಡಿದರು ಆ ಸಿನಿಮಾ ಫ್ಲಾಪ್ ಆಗಿ ನನಗೆ 12 ಕೋಟಿ ನಷ್ಟವಾಯಿತು. ಅದಾದ ಬಳಿಕ ಅದೇ ವರ್ಷ ಪವನ್ ಕಲ್ಯಾಣ್ ನಟನೆಯ ಅಜ್ಞಾತವಾಸಿ ಸಿನಿಮಾ ನಿರ್ಮಿಸಿದೆ. ಆ ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಿದರು. ಆ ಸಿನಿಮಾ ಸಹ ಸೋತು ಹೋಯಿತು. ಆ ಸಿನಿಮಾದಿಂದ ನನಗೆ 13 ಕೋಟಿ ನಷ್ಟವಾಯಿತು. ಒಟ್ಟಿಗೆ ಒಂದೇ ವರ್ಷದಲ್ಲಿ ಕೇವಲ ಎರಡು ಸಿನಿಮಾದಿಂದ ನಾನು 25 ಕೋಟಿ ಕಳೆದುಕೊಂಡೆ ಎಂದು ನೆನಪಿಸಿಕೊಂಡಿದ್ದಾರೆ ದಿಲ್ ರಾಜು.

ಇದನ್ನೂ ಓದಿ: ಯಶ್ ಜೊತೆ ಸಿನಿಮಾ ಮಾಡಲಿದ್ದಾರೆ ತೆಲುಗಿನ ಖ್ಯಾತ ನಿರ್ಮಾಪಕ​; ವಿಷಯ ಖಚಿತಪಡಿಸಿದ ದಿಲ್ ರಾಜು

ತಮಗೆ ವಿತರಕರಾಗಿ ಹೆಚ್ಚು ಹಣ ಗಳಿಸಿಕೊಟ್ಟ ಸಿನಿಮಾ ಬಗ್ಗೆ ಮಾತನಾಡಿದ ದಿಲ್ ರಾಜು, ನಾನು ಸಿನಿಮಾ ವಿತರಣೆಯಲ್ಲಿ ದೊಡ್ಡ ಮೊತ್ತದ ಹಣ ಕಳೆದುಕೊಂಡೆ, ಆಗ ಕಳೆದುಕೊಂಡ ಹಣವನ್ನು ಸಿನಿಮಾ ನಿರ್ಮಾಣದಿಂದ ಸಂಪಾದನೆ ಮಾಡಿದೆ. ಆದರೆ ನಾನು ವಿತರಣೆ ಮಾಡಿದ ಬಾಹುಬಲಿ ಸಿನಿಮಾದಿಂದ ನಾನು ದೊಡ್ಡ ಮೊತ್ತ ಗಳಿಸಿದೆ. ಆ ಸಿನಿಮಾ ವಿತರಣೆಯಿಂದ ನನಗೆ 10 ಕೋಟಿ ಹಣ ಬಂದಿತ್ತು. ಇಷ್ಟು ದೊಡ್ಡ ಮೊತ್ತ ಇನ್ಯಾವ ಸಿನಿಮಾದಿಂದಲೂ ನನಗೆ ಬರಲಿಲ್ಲ ಎಂದಿದ್ದಾರೆ ದಿಲ್ ರಾಜು.

ತೆಲುಗಿನ ಸೂಪರ್-ಡೂಪರ್ ಹಿಟ್ ಸಿನಿಮಾಗಳಾದ ಆರ್ಯ, ಪರಗು, ಭದ್ರ, ಕೊತ್ತ ಭಂಗಾರು ಲೋಕಂ, ಬೊಮ್ಮರಿಲ್ಲು, ಬೃಂದಾವನಂ, ಮಿಸ್ಟರ್ ಪರ್ಫೆಕ್ಟ್, ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಲು, ಡಿಜೆ, ಫಿದಾ, ಹಲೋ ಗುರು ಪ್ರೇಮಕೋಸಮೆ, ಎಂಸಿಎ, ವಕೀಲ್ ಸಾಬ್, ಎಫ್​2, ತಮಿಳು ಸಿನಿಮಾ ವಾರಿಸು, ಇತ್ತೀಚೆಗಿನ ಬಲಗಂ ಸಿನಿಮಾಗಳನ್ನು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಇದೀಗ ರಾಮ್ ಚರಣ್ ನಟಿಸಿ ಶಂಕರ್ ನಿರ್ದೇಶಿಸುತ್ತಿರುವ ಗೇಮ್ ಚೇಂಜರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕನ್ನಡದ ನಟ ಯಶ್ ಜೊತೆಗೂ ಸಿನಿಮಾ ಮಾಡುವುದಾಗಿ ಇತ್ತೀಚೆಗಷ್ಟೆ ಘೋಷಣೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ