
ಪವನ್ ಕಲ್ಯಾಣ್ (Pawan Kalyan) ತೆಲುಗು ಚಿತ್ರರಂಗದ ಸ್ಟಾರ್ ನಟ. ಈಗಾಗಲೇ ಅವರು ಚಿತ್ರರಂಗಕ್ಕೆ ಅಲ್ಪ ವಿರಾಮ ಇಟ್ಟು, ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶ ಡಿಸಿಎಂ ಆಗಿರುವ ಪವನ್ ಕಲ್ಯಾಣ್, ಕೆಲವು ಪ್ರಮುಖ ಖಾತೆಗಳನ್ನು ಸಹ ನಿಭಾಯಿಸುತ್ತಿದ್ದಾರೆ. ಆದರೆ ಚುನಾವಣೆಗೆ ಮುಂಚೆ ಒಪ್ಪಿಕೊಂಡಿದ್ದ ಕೆಲ ಸಿನಿಮಾಗಳಲ್ಲಿ ನಟಿಸಿದ್ದು, ಇನ್ನೊಂದು ಸಿನಿಮಾ ಮಾತ್ರ ಬಾಕಿ ಉಳಿದಿದೆ. ಆ ಸಿನಿಮಾದ ಬಳಿಕ ಸಂಪೂರ್ಣವಾಗಿ ಸಿನಿಮಾದಿಂದ ದೂರಾಗುವುದಾಗಿ ಪವನ್ ಕಲ್ಯಾಣ್ ಈಗಾಗಲೇ ಹೇಳಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ. ಹಾಗಾಗಿ ಅಭಿಮಾನಿಗಳು ಪವನ್ ಕಲ್ಯಾಣ್ ಅವರ ಪುತ್ರ ಸಿನಿಮಾಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದಾರೆ.
ಪವನ್ ಕಲ್ಯಾಣ್ ಪುತ್ರ ಅಕಿರ 21 ವರ್ಷ ವಯಸ್ಸಿನವರಾಗಿದ್ದು ಶಿಕ್ಷಣದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಅಕಿರ ಅವರ ಚಿತ್ರರಂಗ ಪ್ರವೇಶದ ಬಗ್ಗೆ ಚರ್ಚೆಗಳು ಜೋರಾಗಿ ನಡೆದಿವೆ. ಪವನ್ ನಟಿಸಿದ್ದ ಈ ಹಿಂದಿನ ಸಿನಿಮಾ ‘ಓಜಿ’ಯಲ್ಲಿ ಅಕಿರ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದು ಸುಳ್ಳಾಯ್ತು. ಇದೀಗ ಅಕಿರ, ಸ್ವತಂತ್ರ್ಯ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಪವನ್ ಕಲ್ಯಾಣ್ ಜೊತೆಗೆ ಈ ಹಿಂದೆ ಕೆಲಸ ಮಾಡಿರುವ ನಿರ್ಮಾಪಕ, ವಿತರಕ ಟಿಜಿ ವಿಶ್ವಪ್ರಸಾದ್, ಈ ಬಗ್ಗೆ ಮಾತನಾಡಿದ್ದು, ತಾವು ಪವನ್ ಕಲ್ಯಾಣ್ ಪುತ್ರ ಅಕಿರ ಅನ್ನು ಚಿತ್ರರಂಗಕ್ಕೆ ಲಾಂಚ್ ಮಾಡಲು ಸಜ್ಜಾಗಿರುವುದಾಗಿ ಹೇಳಿದ್ದಾರೆ. ಪವನ್ ಕಲ್ಯಾಣ್ ಪುತ್ರ ಅಕಿರ ಜೊತೆಗೆ ನಾನು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಮಾಡಲು ರೆಡಿ ಇರುವುದಾಗಿ ವಿಶ್ವಪ್ರಸಾದ್ ಹೇಳಿದ್ದಾರೆ. ಅದಕ್ಕಾಗಿ ಎಷ್ಟು ಕೋಟಿ ಖರ್ಚಾದರು ಭರಿಸುವುದಾಗಿ ವಿಶ್ವಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ:ಕಾರು ಉಡುಗೊರೆಯಾಗಿ ಕೊಟ್ಟ ನಟ ಪವನ್ ಕಲ್ಯಾಣ್: ಯಾರಿಗೆ? ಏಕೆ?
ವಿಶ್ವಪ್ರಸಾದ್ ಮಾತ್ರವೇ ಅಲ್ಲದೆ, ತೆಲುಗು ಚಿತ್ರರಂಗದ ನಟ, ನಿರ್ಮಾಪಕ, ರಾಜಕಾರಣಿಯೂ ಆಗಿರುವ ಬಂಡ್ಲ ಗಣೇಶ್ ಸಹ ತಾವು, ಅಕಿರ ಅನ್ನು ಲಾಂಚ್ ಮಾಡಲು ಉತ್ಸುಕರಾಗಿರುವುದಾಗಿ ಈ ಹಿಂದೆಯೇ ಹೇಳಿದ್ದರು. ಇನ್ನು ರಾಜಮೌಳಿ ತಂದೆ ವಿಜಯಪ್ರಸಾದ್ ಸಹ, ಕಾರ್ಯಕ್ರಮವೊಂದರಲ್ಲಿ ಪವನ್ ಪುತ್ರ ಅಕಿರ ಚಿತ್ರರಂಗಕ್ಕೆ ಬರಬೇಕು, ಅವರ ತಾಯಿ ರೇಣು ದೇಸಾಯಿ ಈ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದರು.
ಇನ್ನು ಅಕಿರ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿದ್ದಾರೆ. ಅವರು ಹೊರಗೆ ಕಾಣಿಸಿಕೊಂಡರೂ ಸಹ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ. ಅಕಿರ ಸಹ ಇದೀಗ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಅವರು ಶೀಘ್ರವೇ ಚಿತ್ರರಂಗಕ್ಕೆ ಬರುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ