ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ ‘ಪುನೀತ್ ನಿವಾಸ’ ಸಿನಿಮಾ

ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿ ಮೋಹನ್ ಅವರು ‘ಪುನೀತ್ ನಿವಾಸ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಭಿಜಿತ್, ಮಾಸ್ಟರ್ ವಿಠ್ಠಲ್, ಕರಿಸುಬ್ಬು ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಡಾ. ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ‘ಪುನೀತ್ ನಿವಾಸ’ ಸಿನಿಮಾ ಬಿಡುಗಡೆ ಆಗಲಿದೆ ಎಂಬುದು ವಿಶೇಷ.

ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ ‘ಪುನೀತ್ ನಿವಾಸ’ ಸಿನಿಮಾ
Puneeth Nivasa Poster, Dr Rajkumar

Updated on: Mar 31, 2026 | 8:45 PM

ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಭಿಮಾನಿಗಳ ಮನದಲ್ಲಿ ಅವರು ಶಾಶ್ವತವಾಗಿ ಇರುತ್ತಾರೆ. ಒಂದಲ್ಲಾ ಒಂದು ರೂಪದಲ್ಲಿ ಅವರನ್ನು ಸ್ಮರಿಸುವ ಕೆಲಸ ಆಗುತ್ತಿದೆ. ಅದಕ್ಕೆ ‘ಪುನೀತ್ ನಿವಾಸ’ (Puneeth Nivasa) ಸಿನಿಮಾವೇ ಹೊಸ ಉದಾಹರಣೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಶೀರ್ಷಿಕೆಯ ಮೂಲಕ ಈ ಸಿನಿಮಾ ಕೌತುಕ ಮೂಡಿಸಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಹಿರಿಯ ನಟ ಅಭಿಜಿತ್ (Abhijith) ಅವರು ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಏಪ್ರಿಲ್ 24ರಂದು ಡಾ. ರಾಜ್​ಕುಮಾರ್ ಅವರ ಜನ್ಮದಿನ. ಆ ಪ್ರಯುಕ್ತ ‘ಪುನೀತ್ ನಿವಾಸ’ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂಬುದು ವಿಶೇಷ. ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಎಂ.ಎನ್. ಕೃಪಾಕರ್ ಅವರ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಸ್. ಬಾಲು ಅವರ ಛಾಯಾಗ್ರಹಣ ಈ ಸಿನಿಮಾಗಿದೆ.

ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ಮಾತ್ರವಲ್ಲದೇ ಹಿರಿಯ ನಟ ಶಂಕರ್ ಭಟ್, ಗಂಡಸಿ ಸದಾನಂದಸ್ವಾಮಿ, ಕರಿಸುಬ್ಬು ಶ್ರೇಯಸ್, ಐಶ್ವರ್ಯಾ, ಡಿಂಗ್ರಿ ನಾಗರಾಜ್, ಎಂ.ಎಸ್. ಉಮೇಶ್, ಟೆನ್ನಿಸ್ ಕೃಷ್ಣ, ರೇಖಾದಾಸ್, ಗಣೇಶ್‌ರಾವ್ ಕೇಸರಕರ್ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

‘ಪುನೀತ್ ನಿವಾಸ’ ಸಿನಿಮಾದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಕಥೆಯೇ ಇದೆ. ನಾಗೇಂದ್ರ ಪ್ರಸಾದ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ‘ಶ್ರೀಪಂಚಮಿ ಸಿನಿ ಕ್ರಿಯೇಷನ್ಸ್’ ಮೂಲಕ ಪುನೀತ್ ಅಭಿಮಾನಿ ಎಸ್. ಮೋಹನ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಥೆಯ ಬಗ್ಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ ಅಶ್ವಿನಿ

‘ಪುನೀತ್ ಅವರ ಅಪ್ಪಟ ಅಭಿಮಾನಿ ಮಲ್ಲು ಅನಾಥ ಹುಡುಗ. ಕಟ್ಟಡ ಕೂಲಿ ಕೆಲಸ ಮಾಡಿಕೊಂಡಿರುವ ಆತ ತನ್ನ ಮಾಲೀಕನ ಮನೆ ಮಾರಾಟ ಮಾಡಿಸಿಕೊಡುತ್ತಾನೆ. ಆಗ ಮಾಲೀಕ ನೀಡಿದ 5 ಲಕ್ಷ ರೂಪಾಯಿ ಕಮಿಷನ್ ಹಣದಲ್ಲಿ ಕನಸಿನ ಪುನೀತ್ ನಿವಾಸವನ್ನು ನಿರ್ಮಿಸುತ್ತಾನೆ. ನಂತರ ಆ ಪುನೀತ್‌ ನಿವಾಸದ ಒಳಗೆ ಬಂದಾಗ ಅಲ್ಲಿ ಆತನಿಗೆ ಪುನೀತ್ ಅವರೇ ಕಾಣಿಸ್ತಾರೆ. ಹೇಗೆ ಕಾಣಿಸುತ್ತಾರೆ ಎಂಬುದೇ ಚಿತ್ರದ ಕುತೂಹಲ’ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us