ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ ‘ಪುಷ್ಪ’. ಈ ಚಿತ್ರ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ನಿರ್ದೇಶಕ ಸುಕುಮಾರ್ ಅವರು ಕಥೆಯನ್ನು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರು ಫಿದಾ ಆದರು. 2021ರ ಡಿಸೆಂಬರ್ 17ರಂದು ‘ಪುಷ್ಪ’ (Pushpa Movie) ಸಿನಿಮಾ ತೆರೆಕಂಡಿತು. ಭರ್ಜರಿ ಮಾಸ್ ಅವತಾರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡರು. ‘ಕೆಜಿಎಫ್: ಚಾಪ್ಟರ್ 2’ ರೀತಿಯೇ ‘ಪುಷ್ಪ’ ಕಥೆಯನ್ನೂ ಎರಡು ಪಾರ್ಟ್ಗಳಲ್ಲಿ ಹೇಳಲಾಗುತ್ತಿದೆ. ‘ಪುಷ್ಪ’ ಚಿತ್ರದ ಮೊದಲ ಪಾರ್ಟ್ ಸೂಪರ್ ಹಿಟ್ ಆಗಿದ್ದರಿಂದ ಎರಡನೇ ಪಾರ್ಟ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಆದರೆ ಅದಕ್ಕಿಂತಲೂ ಎಗ್ಸೈಟ್ ಆದಂತಹ ಸುದ್ದಿ ಈಗ ಕೇಳಿಬಂದಿದೆ. ‘ಪುಷ್ಪ 2’ ಚಿತ್ರೀಕರಣ ಆರಂಭ ಆಗುವುದಕ್ಕಿಂತ ಮುನ್ನವೇ ‘ಪುಷ್ಪ 3’ (Pushpa 3) ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಖ್ಯಾತ ನಟ ಫಹಾದ್ ಫಾಸಿಲ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಮಾತ್ರವಲ್ಲದೇ ಮಲಯಾಳಂ ನಟ ಫಹಾದ್ ಫಾಸಿಲ್ ಕೂಡ ‘ಪುಷ್ಪ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಎರಡನೇ ಪಾರ್ಟ್ನಲ್ಲಿ ಅವರ ಪಾತ್ರ ಹೆಚ್ಚು ಹೈಲೈಟ್ ಆಗಲಿದೆ. ಅಷ್ಟೇ ಅಲ್ಲ, ಮೂರನೇ ಪಾರ್ಟ್ ಕೂಡ ಬರುತ್ತದೆ ಎಂಬ ಬಗ್ಗೆ ಫಹಾದ್ ಫಾಸಿಲ್ ಸುಳಿವು ನೀಡಿದ್ದಾರೆ.
‘ಪುಷ್ಪ 3’ ಬಗ್ಗೆ ನಿರ್ದೇಶಕ ಸುಕುಮಾರ್ ಆಗಲಿ, ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಚಿತ್ರತಂಡದ ಒಳಗೆ ಇಂಥದ್ದೊಂದು ಪ್ಲ್ಯಾನ್ ಇದೆ ಎಂಬುದು ಈಗ ಬಹಿರಂಗ ಆಗಿದೆ. ‘ಮೊದಲಿಗೆ ಸುಕುಮಾರ್ ಸರ್ ನನಗೆ ಕಥೆ ಹೇಳಿದಾಗ ಅದು ಒಂದು ಪಾರ್ಟ್ನ ಸಿನಿಮಾ ಆಗಿತ್ತು. ಆದರೆ ನಂತರ ಎರಡನೇ ಪಾರ್ಟ್ಗೆ ಪ್ಲ್ಯಾನ್ ಮಾಡಲಾಯಿತು. ಇತ್ತೀಚೆಗೆ ಅವರು ನನ್ನ ಬಳಿ ಮಾತನಾಡಿದಾಗ ಮೂರನೇ ಭಾಗಕ್ಕೆ ತಯಾರಾಗುವಂತೆ ಹೇಳಿದರು. ಅಷ್ಟು ಹೇರಳವಾದ ಕಥಾವಸ್ತು ಅವರ ಬಳಿ ಇದೆ’ ಎಂದು ಫಹಾದ್ ಫಾಸಿಲ್ ಹೇಳಿದ್ದಾರೆ.
‘ಕೆಜಿಎಫ್’ ಚಿತ್ರದ 3ನೇ ಚಾಪ್ಟರ್ ಬರುತ್ತಿದೆ. ಅದೇ ಕಾರಣಕ್ಕೆ ‘ಪುಷ್ಪ’ ತಂಡ ಕೂಡ ಈ ರೀತಿ ಆಲೋಚಿಸಿರಬಹುದು ಎನ್ನಲಾಗುತ್ತಿದೆ. ಈ ಎರಡು ಸಿನಿಮಾಗಳ ನಡುವೆ ಪ್ರೇಕ್ಷಕರು ಮೊದಲಿನಿಂದಲೂ ಹೋಲಿಕೆ ಮಾಡುತ್ತಲೇ ಬಂದಿದ್ದಾರೆ. ಬಾಕ್ಸ್ ಆಫೀಸ್ ಗಳಿಕೆ ವಿಚಾರದಲ್ಲೂ ಹೋಲಿಕೆ ಮಾಡಲಾಗಿದೆ.