ಬಲವಂತವಾಗಿ ನಟಿಯರ ಮೈಮುಟ್ಟಿ ಮಾತನಾಡಿಸಿ ಟ್ರೋಲ್ ಆದ ಹಿರಿಯ ನಿರ್ದೇಶಕ

84 ವರ್ಷದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿಯ ಕೈಗಳನ್ನು ಹಿಡಿದು ಎಳೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಲೇ, ಜನರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಘವೇಂದ್ರ ರಾವ್ ಅವರಿಂದ ಪದೇ ಪದೇ ಇಂಥ ವರ್ತನೆ ಮರುಕಳಿಸುತ್ತಿದೆ.

ಬಲವಂತವಾಗಿ ನಟಿಯರ ಮೈಮುಟ್ಟಿ ಮಾತನಾಡಿಸಿ ಟ್ರೋಲ್ ಆದ ಹಿರಿಯ ನಿರ್ದೇಶಕ
Krithi Shetty, Keerthy Suresh, Raghavendra Rao

Updated on: Jun 19, 2026 | 3:21 PM

ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ಇತ್ತೀಚೆಗೆ ನಡೆದ ಸಿನಿಮಾವೊಂದರ ಮುಹೂರ್ತದ ವೇಳೆ ಸ್ಟಾರ್ ನಟಿಯರಾದ ಕೀರ್ತಿ ಸುರೇಶ್ (Keerthy Suresh) ಮತ್ತು ಕೃತಿ ಶೆಟ್ಟಿ ಅವರ ಕೈಗಳನ್ನು ಬಲವಂತವಾಗಿ ಹಿಡಿದು ಎಳೆದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೊದಲು ಕೂಡ ಕೆ. ರಾಘವೇಂದ್ರ ರಾವ್ (Raghavendra Rao) ಅವರು ಈ ರೀತಿಯ ವರ್ತನೆಯಿಂದ ಟ್ರೋಲ್ ಆಗಿದ್ದರು. ಈಗ ಮತ್ತೆ ಅದೇ ವರ್ತನೆ ಮುಂದುವರಿಸಿದ್ದಾರೆ.

ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶನದ, ಹಿರಿಯ ನಟ ವೆಂಕಟೇಶ್ ಮತ್ತು ಕಲ್ಯಾಣ್ ರಾಮ್ ನಂದಮೂರಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಹೊಸ ಚಿತ್ರದ ಮುಹೂರ್ತ ಸಮಾರಂಭ ಗುರುವಾರ (ಜೂನ್ 18) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ 84 ವರ್ಷದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರಿಗೆ ಚಿತ್ರದ ಮೊದಲ ದೃಶ್ಯಕ್ಕೆ ಆ್ಯಕ್ಷನ್-ಕಟ್ ಹೇಳಲು ಆಹ್ವಾನಿಸಲಾಗಿತ್ತು.

ಮುಹೂರ್ತದ ಶಾಟ್ ನಿರ್ದೇಶಿಸುವ ಸಂದರ್ಭದಲ್ಲಿ ರಾಘವೇಂದ್ರ ರಾವ್ ಅವರು ನಟಿ ಕೀರ್ತಿ ಸುರೇಶ್ ಅವರ ಕೈಯನ್ನು ಬಲವಂತವಾಗಿ ಹಿಡಿದು ಹತ್ತಿರಕ್ಕೆ ಎಳೆದಿದ್ದಾರೆ. ಆ ನಂತರ ತಕ್ಷಣವೇ ತಮ್ಮ ನಿರ್ಧಾರ ಬದಲಾಯಿಸಿದವರಂತೆ ಮತ್ತೊಬ್ಬ ನಟಿ ಕೃತಿ ಶೆಟ್ಟಿ ಅವರ ಕೈ ಹಿಡಿದು ಎಳೆದಿದ್ದಾರೆ. ಬಳಿಕ ನಟರಾದ ವೆಂಕಟೇಶ್ ಮತ್ತು ಕಲ್ಯಾಣ್ ರಾಮ್ ಅವರ ಹೆಗಲ ಮೇಲೆ ನಟಿಯರು ಹೇಗೆ ಕೈ ಇಡಬೇಕು ಎಂದು ತೋರಿಸಿಕೊಡುವ ನೆಪದಲ್ಲಿ ಈ ರೀತಿ ವರ್ತಿಸಿದ್ದಾರೆ. ಸದ್ಯ ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿಯರ ಅನುಮತಿ ಇಲ್ಲದೆ ಈ ರೀತಿ ಸಾರ್ವಜನಿಕವಾಗಿ ಕೈ ಹಿಡಿದು ಎಳೆದ ಹಿರಿಯ ನಿರ್ದೇಶಕನ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ‘ಈ ಮುದುಕನಿಗೆ ಪ್ರತಿ ಬಾರಿಯೂ ನಟಿಯರನ್ನು ಮುಟ್ಟಿ ನೋಡುವುದೇ ಕೆಲಸವಾಗಿದೆ’ ಎಂದು ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ‘ಮಹಿಳೆಯರ ಒಪ್ಪಿಗೆ ಇಲ್ಲದೆ ಅವರ ದೇಹ ಮುಟ್ಟಲು ಈತನಿಗೆ ಹಕ್ಕು ಕೊಟ್ಟವರು ಯಾರು? ತುಂಬಾ ಕೀಳು ಮಟ್ಟದ ವರ್ತನೆ’ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಟಿ ಕೀರ್ತಿ ಸುರೇಶ್​ಗೆ ಬಾಡಿ ಶೇಮಿಂಗ್; ಸರ್ಜರಿ ವದಂತಿಗಳಿಗೆ ಖಡಕ್ ತಿರುಗೇಟು

ಇದೇ ಮೊದಲಲ್ಲ, ಈ ಹಿಂದೆ ನಟಿ ನಿಹಾರಿಕಾ ಕೊನಿಡೇಲ ಅವರ ವಿಷಯದಲ್ಲೂ ರಾಘವೇಂದ್ರ ರಾವ್ ಇದೇ ರೀತಿ ನಡೆದುಕೊಂಡು ಟ್ರೋಲ್ ಆಗಿದ್ದರು. ‘ಹಳೇ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇರಲಿಲ್ಲ ಎಂದು ಇವರು ಬಚಾವ್ ಆಗುತ್ತಿದ್ದರು, ಆದರೆ ಈಗಲೂ ಇವರು ಬುದ್ಧಿ ಕಲಿತಿಲ್ಲ’ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಗರಂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us