ಮಹೇಶ್ ಬಾಬು (Mahesh Babu) ಪ್ರಸ್ತುತ ರಾಜಮೌಳಿ ನಿರ್ದೇಶಿಸುತ್ತಿರುವ ‘ವಾರಣಾಸಿ’ ಸಿನಿಮಾನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ವಿಶ್ವ ಮಟ್ಟದಲ್ಲಿ ಬಿಡುಗಡೆ ಮಾಡಲು ರಾಜಮೌಳಿ ಯೋಜನೆ ಹಾಕಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಟೈಟಲ್ ಬಿಡುಗಡೆ, ಟೀಸರ್ ಬಿಡುಗಡೆ ಕಾರ್ಯಕ್ರಮವನ್ನೇ ವಿಶ್ವದರ್ಜೆಯಲ್ಲಿ ರಾಜಮೌಳಿ ಮಾಡಿದ್ದಾರೆ. ಈ ಸಿನಿಮಾ ಮೂಲಕ ಮಹೇಶ್ ಬಾಬು ಸಹ ಪ್ಯಾನ್ ವರ್ಲ್ಡ್ ನಟನಾಗುವ ಎಲ್ಲ ಸಂಭವ ಇದೆ. ಹೀಗಿರುವಾಗ ಶೀಘ್ರವೇ ಬಿಡುಗಡೆ ಆಗಲಿರುವ ‘ಅವತಾರ್ 3’ ಸಿನಿಮಾನಲ್ಲಿ ಮಹೇಶ್ ಬಾಬು ಇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಹೇಗೆ ಸಾಧ್ಯ? ವಿವರ ಇಲ್ಲಿದೆ…
‘ಅವತಾರ್ 3’ ಸಿನಿಮಾ ಡಿಸೆಂಬರ್ 19ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾದ ಪ್ರೀಮಿಯರ್ ಶೋ ಅಮೆರಿಕದಲ್ಲಿ ಆಗಿದೆ. ಇದೀಗ ಈ ಸಿನಿಮಾಕ್ಕೆ ‘ವಾರಣಾಸಿ’ ಸಿನಿಮಾದ ಟೀಸರ್ ಅನ್ನು ಅಟ್ಯಾಚ್ ಮಾಡಲಾಗುತ್ತಿರುವ ಸುದ್ದಿ ಹರಿದಾಡುತ್ತಿದೆ. ‘ವಾರಣಾಸಿ’ ಸಿನಿಮಾವನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಮಾಡಲು ರಾಜಮೌಳಿಯ ಮೊದಲ ಹೆಜ್ಜೆ ಇದಾಗಿರಲಿದೆ. ‘ಅವತಾರ್ 3’ ಸಿನಿಮಾಕ್ಕೆ ‘ವಾರಣಾಸಿ’ ಟೀಸರ್ ಅಟ್ಯಾಚ್ ಮಾಡಿ ಕೆಲವು ದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
‘ಅವತಾರ್’ ಸಿನಿಮಾ ಸರಣಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಈ ಸಿನಿಮಾವನ್ನು ಮುಗಿಬಿದ್ದು ನೋಡುವುದು ಮೊದಲಿನಿಂದಲೂ ನಡೆದು ಬಂದಿದೆ. ಇದೇ ಕಾರಣಕ್ಕೆ ಈ ಸಿನಿಮಾವನ್ನು ‘ವಾರಣಾಸಿ’ ಸಿನಿಮಾದ ಪ್ರಚಾರಕ್ಕೆ ಬಳಸಲು ರಾಜಮೌಳಿ ಮುಂದಾಗಿದ್ದು, ಕೆಲವು ಆಯ್ದ ದೇಶಗಳಲ್ಲಿ ‘ಅವಾತಾರ್ 3’ ಸಿನಿಮಾದ ಇಂಟರ್ವೆಲ್ ಸಮಯದಲ್ಲಿ ಮಹೇಶ್ ಬಾಬು ನಟನೆಯ ‘ವಾರಣಾಸಿ’ ಸಿನಿಮಾದ ಟೀಸರ್ ಪ್ರದರ್ಶನ ಆಗಲಿದೆ.
ಇದನ್ನೂ ಓದಿ:‘ವಾರಣಾಸಿ’ ಸಿನಿಮಾಕ್ಕೆ ಸಂಕಷ್ಟ, ಹೆಸರು ಬದಲಾಯಿಸಿದ ರಾಜಮೌಳಿ
‘ಅವತಾರ್ 3’ ಅಥವಾ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾವನ್ನು ಜೇಮ್ಸ್ ಕ್ಯಾಮರನ್ ನಿರ್ದೇಶನ ಮಾಡಿದ್ದಾರೆ. ಇದು ‘ಅವತಾರ್’ ಸರಣಿಯ ಮೂರನೇ ಸಿನಿಮಾ ಆಗಿದೆ. ಜೇಮ್ಸ್ ಕ್ಯಾಮರನ್, ರಾಜಮೌಳಿಯ ಮಿತ್ರರಾಗಿದ್ದಾರೆ. ರಾಜಮೌಳಿ ನಿರ್ದೇಶಿಸಿದ್ದ ‘ಆರ್ಆರ್ಆರ್’ ಸಿನಿಮಾ ವೀಕ್ಷಿಸಿದ್ದ ಜೇಮ್ಸ್ ಕ್ಯಾಮರನ್, ರಾಜಮೌಳಿಯನ್ನು ಕೊಂಡಾಡಿದ್ದರು, ಮಾತ್ರವಲ್ಲದೆ, ಹಾಲಿವುಡ್ನಲ್ಲಿ ಸಿನಿಮಾ ಮಾಡುವುದಾದರೆ ತಾವು ಬೆಂಬಲ ನೀಡುವುದಾಗಿ ಆಫರ್ ಸಹ ನೀಡಿದ್ದರು.
‘ಆರ್ಆರ್ಆರ್’ ಕುರಿತ ಡಾಕ್ಯುಮೆಂಟರಿಯಲ್ಲಿ ಸಹ ಜೇಮ್ಸ್ ಕ್ಯಾಮರನ್ ಕಾಣಿಸಿಕೊಂಡು, ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದೀಗ ತಮ್ಮ ಸಿನಿಮಾ ಮೂಲಕ ರಾಜಮೌಳಿಯವರ ಸಿನಿಮಾಕ್ಕೆ ಪ್ರಚಾರ ನೀಡಲು ಜೇಮ್ಸ್ ಕ್ಯಾಮರನ್ ಒಪ್ಪಿಗೆ ಸೂಚಿಸಿದಂತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ