
ರಜನೀಕಾಂತ್ (Rajinikantha) ಭಾರತದ ನಂಬರ್ 1 ಸೂಪರ್ ಸ್ಟಾರ್. ಹಲವು ದಶಕಗಳಿಂದಲೂ ರಜನೀಕಾಂತ್ ಅವರು ಸೂಪರ್ ಸ್ಟಾರ್ ಸ್ಥಾನದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ರಜನೀಕಾಂತ್ ಸಿನಿಮಾ ನಟನಾಗಿ ಅದ್ಭುತ ಕತೆಗಳ ಮೂಲಕ ಹಲವರಿಗೆ ಸ್ಪೂರ್ತಿ ತುಂಬಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನವೂ ಸಹ ಯಾವುದೇ ಸಿನಿಮಾ ಕತೆಗಿಂತಲೂ ಕಡಿಮೆ ಆಗಿದ್ದಲ್ಲ. ಬೆಂಗಳೂರಿನ ಸಣ್ಣ ಏರಿಯಾದಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿ ರಜನೀ ಏರಿದ ಎತ್ತರ ಅಸಾಧಾರಣವಾದುದು. ಅಷ್ಟು ಎತ್ತರಕ್ಕೆ ಏರಿದ ಬಳಿಕವೂ ರಜನೀ ಕಾಯ್ದುಕೊಂಡ ಸರಳತೆ, ವಿನಮ್ರತೆ ಕೋಟ್ಯಂತರ ಜನರಿಗೆ ಸ್ಪೂರ್ತಿ. ಈ ಸ್ಪೂರ್ತಿದಾಯಕ ಕತೆ ಇದೀಗ ಪುಸ್ತಕ ರೂಪದಲ್ಲಿ ಬರೆಯಲಿದೆ.
ರಜನೀಕಾಂತ್ ಅವರು ತಮ್ಮ ಜೀವನದ ಘಟನೆಗಳನ್ನು ಹಲವು ಸಂದರ್ಭಗಳಲ್ಲಿ ಹಂಚಿಕೊಂಡಿದ್ದಾರೆ. ರಜನೀಕಾಂತ್ ಅವರ ಸಿನಿಮಾದ ಕಾರ್ಯಕ್ರಮಗಳಲ್ಲಿ ಅವರು ತಮ್ಮ ಜೀವನದ ವಿಷಯಗಳನ್ನು ಬಲು ರಸವತ್ತಾಗಿ ಹಂಚಿಕೊಳ್ಳುತ್ತಾರೆ. ಅದನ್ನು ಕೇಳುವುದೇ ಅಭಿಮಾನಿಗಳಿಗೆ ಖುಷಿ. ಇದೀಗ ರಜನೀಕಾಂತ್ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಪುಸ್ತಕವಾಗಿ ಹೊರ ತರುತ್ತಿದ್ದಾರೆ. ರಜನೀಕಾಂತ್ ತಮ್ಮ ಆತ್ಮಚರಿತ್ರೆಯನ್ನು ಬರೆಯುತ್ತಿದ್ದಾರೆ.
ಈ ಕುರಿತು ಅವರ ಪುತ್ರಿ ಸೌಂದರ್ಯ ರಜನೀಕಾಂತ್ ಮಾತನಾಡಿದ್ದು, ‘ತಂದೆ ರಜನೀಕಾಂತ್ ತಮ್ಮ ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಬರವಣಿಗೆ ಪ್ರಸ್ತುತ ಚಾಲ್ತಿಯಲ್ಲಿದೆ. ಅದು ಬಿಡುಗಡೆ ಆದಾಗ ಅದೊಂದು ವಿಶ್ವದಲ್ಲೇ ಒಂದು ವಿದ್ಯಮಾನವಾಗಿ ಗುರುತಿಸಿಕೊಳ್ಳಲಿದೆ’ ಎಂದಿದ್ದಾರೆ. ತಾವೂ ಸಹ ತಂದೆಯವರ ಆತ್ಮಚರಿತ್ರೆ ಓದಲು ಕಾತರರಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:37 ವರ್ಷದ ಹಿಂದೆ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆ ಆಗುತ್ತಿದೆ ರಜನೀಕಾಂತ್ ಸಿನಿಮಾ
ರಜನೀಕಾಂತ್ ಅವರ ಜೀವನ ಅಸಾಧಾರಣವಾದುದು. ಬೆಂಗಳೂರಿನ ಸಣ್ಣ ಕುಟುಂಬದಲ್ಲಿ ಜನಿಸಿ ಸಾಕಷ್ಟು, ನೋವು, ಅವಮಾನಗಳನ್ನು ಅನುಭವಿಸಿ ನಟನಾಗಿ, ಆ ನಂತರವೂ ಹಲವು ಅವಮಾನಗಳನ್ನು ಎದುರಿಸಿ ಸ್ಟಾರ್ ಆಗಿ ಬೆಳೆದ ಬಗೆ ಅಸಾಧಾರಣವಾದುದು. ರಜನೀಕಾಂತ್ ಅವರ ಅತ್ಮಚರಿತ್ರೆ ಕೋಟ್ಯಂತರ ಜನರಿಗೆ ಸ್ಪೂರ್ತಿಯನ್ನಂತೂ ನೀಡುವುದು ಖಾತ್ರಿ.
ಸಿನಿಮಾಗಳ ವಿಷಯಕ್ಕೆ ಬರುವುದಾದರೆ ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಕಮಲ್ ಹಾಸನ್ ನಿರ್ಮಾಣ ಮಾಡಲಿರುವ ಸಿನಿಮಾನಲ್ಲಿ ಅವರು ನಟಿಸಲಿದ್ದಾರೆ. ಅದಾದ ಬಳಿಕ ಪುತ್ರಿ ಸೌಂದರ್ಯ ನಿರ್ದೇಶನದ ಮತ್ತೊಂದು ಸಿನಿಮಾನಲ್ಲಿ ನಟಿಸುವ ಸಾಧ್ಯತೆ ಇದೆ. ‘ಕೂಲಿ 2’ ಸಹ ಬರಲಿದೆ ಎನ್ನಲಾಗುತ್ತಿದೆ ಆದರೆ ಖಾತ್ರಿ ಇಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ