ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿ ಆಗಿದ್ದುಂಟು. ಕೆಲವರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇನ್ನೂ ಕೆಲವರು ಸೈಲೆಂಟ್ ಆಗಿ ಕಡೆಗಣಿಸುತ್ತಾರೆ. ಒಟ್ಟಿನಲ್ಲಿ ರಾಮ್ ಗೋಪಾಲ್ ವರ್ಮಾ (RGV) ಆಗಾಗ ಸುದ್ದಿ ಆಗುವುದಂತೂ ನಿಜ. ಸದ್ಯ ಅವರು ತಮ್ಮ ಹೊಸ ಸಿನಿಮಾದ ಬಿಡುಗಡೆಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಲಡ್ಕಿ’ ಚಿತ್ರ ಜುಲೈ 15ರಂದು ತೆರೆ ಕಾಣುತ್ತಿದೆ. ಕನ್ನಡಕ್ಕೂ ಈ ಚಿತ್ರ ಡಬ್ ಆಗಿದ್ದು, ‘ಹುಡುಗಿ’ ಶೀರ್ಷಿಕೆಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರದ ವೇಳೆ ರಾಮ್ ಗೋಪಾವ್ ವರ್ಮಾ ಅವರು ಒಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಖ್ಯಾತ ನಟ ಬ್ರೂಸ್ ಲೀ (Bruce Lee) ಅವರಿಗೆ ಕಿಸ್ ಮಾಡುವ ಆಸೆ ತಮಗೆ ಇತ್ತು ಎಂದು ಅವರು ಹೇಳಿದ್ದಾರೆ.
ಮಾರ್ಷಲ್ ಆರ್ಟ್ಸ್ನಲ್ಲಿ ಬ್ರೂಸ್ ಲೀ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದರು. ಅವರ ಸಿನಿಮಾಗಳು ಇಂದಿಗೂ ಪ್ರೇಕ್ಷಕರ ಫೇವರಿಟ್ ಆಗಿ ಉಳಿದುಕೊಂಡಿವೆ. ಬ್ರೂಸ್ ಲೀ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರಿಗೆ ವಿಪರೀತ ಸೆಳೆತ ಇತ್ತು. ಅವರನ್ನು ಸ್ಫೂರ್ತಿಯಾಗಿ ಇಟ್ಟುಕೊಂಡೇ ಅವರು ‘ಲಡ್ಕಿ’ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿ ಪೂಜಾ ಭಾಲೇಕರ್ ಅವರು ಮಾರ್ಷಲ್ ಆರ್ಟ್ಸ್ ಪರಿಣಿತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಬ್ರೂಸ್ ಲೀ ಅವರಲ್ಲಿ ಏನೋ ಒಂದು ಬಗೆಯ ವಿಶೇಷತೆ ಇತ್ತು. ನಾನು ಸಲಿಂಗಕಾಮಿ ಅಲ್ಲ. ಆದರೂ ನಾನು ಕಿಸ್ ಮಾಡಬೇಕು ಎಂದು ಬಯಸಿದ ಪುರುಷ ಎಂದರೆ ಅದು ಬ್ರೂಸ್ ಲೀ ಮಾತ್ರ’ ಅಂತ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಬ್ರೂಸ್ ಲೀ ನಟನೆಯ ‘ಎಂಟರ್ ದಿ ಡ್ರ್ಯಾಗನ್’ ಸಿನಿಮಾವನ್ನು ಕಾಲೇಜು ದಿನಗಳಲ್ಲಿ ಇದ್ದಾಗ ವರ್ಮಾ ನೋಡಿದ್ದರು. ಮಾರ್ಷಲ್ ಆರ್ಟ್ಸ್ ಕುರಿತು ಸಿನಿಮಾ ಮಾಡಬೇಕು ಎಂಬ ಆಸೆ ಆಗಲೇ ಅವರ ಮನದಲ್ಲಿ ಚಿಗುರಿತ್ತು. ಅದು ‘ಲಡ್ಕಿ’ ಚಿತ್ರದ ಮೂಲಕ ನೆರವೇರಿದೆ.
‘ಹುಡುಗಿ’ ಚಿತ್ರದ ಪೋಸ್ಟರ್ಗಳು ವೈರಲ್ ಆಗಿವೆ. ಪೂಜಾ ಭಾಲೇಕರ್ ಅವರು ಸಿಕ್ಕಾಪಟ್ಟೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಪೋಸ್ಟರ್ಗಳು ಸಾಕ್ಷಿ ಒದಗಿಸುತ್ತಿವೆ. ಮಾರ್ಷಲ್ ಆರ್ಟ್ಸ್ ಬಲ್ಲಂತಹ ಹುಡುಗಿಯಾಗಿ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಿಯಲ್ ಲೈಫ್ನಲ್ಲಿಯೂ ಅವರು ಈ ಸಮರ ಕಲೆಯನ್ನು ಕಲಿತಿದ್ದಾರೆ ಎಂಬುದು ವಿಶೇಷ.
Published On - 7:26 am, Thu, 14 July 22