
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಕಥಾಹಂದರದ ಆ್ಯಕ್ಷನ್-ಡ್ರಾಮಾ ‘ರಣಬಾಲಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಹುಲ್ ಸಾಂಕೃತ್ಯನ್ ನಿರ್ದೇಶನದ ಈ ಸಿನಿಮಾವನ್ನು ಅಕ್ಟೋಬರ್‌ನಲ್ಲಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದ್ದು, ಇದೀಗ ‘ದಿ ಸ್ಯಾವೇಜಸ್ ಓತ್’ ಎಂಬ ಶೀರ್ಷಿಕೆಯಡಿ ರಗಡ್ ಟೀಸರ್ ಹೊರತಂದಿದೆ. ಈ ಟೀಸರ್ ನೋಡಿದ ಅಭಿಮಾನಿಗಳಿಗೆ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ.
2 ನಿಮಿಷ 32 ಸೆಕೆಂಡುಗಳ ಈ ಟೀಸರ್ 1876-1878ರ ಅವಧಿಯಲ್ಲಿ ಸಂಭವಿಸಿದ ‘ಮದ್ರಾಸ್ ಕ್ಷಾಮ’ ಹಿನ್ನೆಲೆಯನ್ನು ಹೊಂದಿದೆ. ತೀವ್ರ ಬರಗಾಲ, ಬ್ರಿಟಿಷರ ಕ್ರೂರ ರಫ್ತು ನೀತಿ ಮತ್ತು ಕಳಪೆ ಪರಿಹಾರ ವ್ಯವಸ್ಥೆಯಿಂದಾಗಿ ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ಲಕ್ಷಾಂತರ ಜನರು ಹಸಿವಿನಿಂದ ಪ್ರಾಣ ಕಳೆದುಕೊಂಡಿದ್ದರು. ಈ ಕರಾಳ ಅಧ್ಯಾಯದ ನಡುವೆ ಬ್ರಿಟಿಷ್ ಅಧಿಕಾರಿಗಳ ದೌರ್ಜನ್ಯ ಮತ್ತು ಅವರ ವಿರುದ್ಧ ಬಂಡೇಳುವ ನಾಯಕನ ಕಥೆಯನ್ನು ಟೀಸರ್‌ನಲ್ಲಿ ಕಟ್ಟಿಕೊಡಲಾಗಿದೆ.
‘ದಿ ಮಮ್ಮಿ’ ಸಿನಿಮಾ ಖ್ಯಾತಿಯ ಹಾಲಿವುಡ್ ನಟ ಆರ್ನಾಲ್ಡ್ ವೋಸ್ಲೂ ಅವರು ‘ರಣಬಾಲಿ’ ಚಿತ್ರದಲ್ಲಿ ‘ಸರ್ ಥಿಯೋಡೋರ್ ಹೆಕ್ಟರ್’ ಎಂಬ ಕ್ರೂರ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಬ್ರಿಟಿಷರು ನಡೆಸಿದ ಅಮಾಯವೀಯ ಕೃತ್ಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಅದರ ಝಲಕ್ ಈ ಟೀಸರ್‌ನಲ್ಲಿ ಕಾಣಿಸಿದೆ.
ರಾಯಲಸೀಮೆಯ ಮಣ್ಣಿನ ಮಗ ‘ರಣಬಾಲಿ’ ಎಂಬ ಶಕ್ತಿಶಾಲಿ ಪಾತ್ರದಲ್ಲಿ ವಿಜಯ್ ದೇವರಕೊಂಡ ಮಿಂಚಿದ್ದಾರೆ. ಉದ್ದವಾದ ಮೀಸೆ, ಹಾರಾಡುವ ಕೂದಲು ಮತ್ತು ಕುದುರೆ ಸವಾರಿಯ ಸಾಹಸ ದೃಶ್ಯಗಳಲ್ಲಿ ವಿಜಯ್ ಅತ್ಯಂತ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೆಂಡತಿ ಜಯಮ್ಮನಾಗಿ ಹಾಗೂ ಹೋರಾಟದ ಪಾಲುದಾರರಾಗಿ ರಶ್ಮಿಕಾ ಮಂದಣ್ಣ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ‘ರಣಬಾಲಿ’ ಸೆಟ್‌ನಲ್ಲಿ ವಿಜಯ್ ದೇವರಕೊಂಡ ಭಾರಿ ಬೇಡಿಕೆ ಇಟ್ಟರಾ? ವೈರಲ್ ಸ್ಕ್ರೀನ್‌ಶಾಟ್‌ಗೆ ಸಿಕ್ಕಿತು ಸ್ಪಷ್ಟನೆ
ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದ ಕಥಾಹಂದರ ಹೊಂದಿರುವ ‘ರಣಬಾಲಿ’ ಟೀಸರ್‌ನ ಕೊನೆಯಲ್ಲಿ ದೈವಿಕ ಅಂಶಗಳ ಸುಳಿವನ್ನು ನೀಡಲಾಗಿದೆ. ಈ ಚಿತ್ರವನ್ನು ದಸರಾ ಹಬ್ಬದ ಶುಭಸಮಯದಲ್ಲಿ, ಅಂದರೆ ಅಕ್ಟೋಬರ್ 16ರಂದು ವಿಶ್ವದಾದ್ಯಂತ ತೆರೆಗೆ ತರಲು ಪ್ಲ್ಯಾನ್ ಮಾಡಲಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.