
ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಹಾಗೂ ಬ್ರೇಕಪ್‌ಗಳ ಸರಣಿ ತೀರಾ ಹೆಚ್ಚಾಗುತ್ತಿದೆ. ವರ್ಷಗಟ್ಟಲೆ ಸಂಸಾರ ನಡೆಸಿದ ಸ್ಟಾರ್ ಜೋಡಿಗಳು ಮಾತ್ರವಲ್ಲದೆ, ಮದುವೆಯಾಗಿ ಕೆಲವೇ ತಿಂಗಳು ಕಳೆದ ದಂಪತಿಗಳು ಕೂಡ ಬೇರ್ಪಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡುತ್ತಿದ್ದಾರೆ. ಇದೀಗ ಈ ಸಾಲಿಗೆ ಬಾಲಿವುಡ್‌ನ ಖ್ಯಾತ ರ‍್ಯಾಪರ್ ಹಾಗೂ ಜನಪ್ರಿಯ ಗಾಯಕ ಬಾದ್‌ಶಾ (Badsghah) ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ಬಾದ್‌ಶಾ ಮತ್ತು ಅವರ ಎರಡನೇ ಪತ್ನಿ ಇಶಾ ರಿಖಿ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ಮೂಡಿದ್ದು, ಶೀಘ್ರದಲ್ಲೇ ಈ ಜೋಡಿ ವಿಚ್ಛೇದನ ಪಡೆಯಲಿದೆ ಎಂಬ ವರದಿಗಳು ಸಿನಿಮಾ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.
ಹಿಂದಿ ಚಿತ್ರರಂಗದಲ್ಲಿ ಸಾಲು ಸಾಲು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಬಾದ್‌ಶಾ, ಕೇವಲ ಗಾಯಕರಾಗಿ ಮಾತ್ರವಲ್ಲದೆ ಹಲವು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದು ಬಾದ್‌ಶಾ ಅವರ ಎರಡನೇ ಮದುವೆಯಾಗಿದೆ.
ಈ ಹಿಂದೆ ಅವರು ಜಾಸ್ಮಿನ್ ಮಸಿಹ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 2020 ರಲ್ಲಿ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದು ಬೇರ್ಪಟ್ಟಿದ್ದರು. ಇದಾದ ಬಳಿಕ ಇಶಾ ರಿಖಿ ಅವರೊಂದಿಗೆ ಪ್ರೀತಿಯಲ್ಲಿದ್ದ ಬಾದ್‌ಶಾ, ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಅತ್ಯಂತ ಸರಳವಾಗಿ ಎರಡನೇ ವಿವಾಹವಾಗಿದ್ದರು.
‘ಕಣ್ಣಿಗೆ ಕಾಣಿಸುವಂತಹ ಯಾವುದೇ ಗಾಯದ ಗುರುತುಗಳನ್ನು ಬಿಡದ ಕೆಲವು ಹೋರಾಟಗಳಿರುತ್ತವೆ. ದೀರ್ಘಕಾಲದವರೆಗೆ ನಾನು ಭಯದಿಂದಾಗಿ ಮೌನವಾಗಿದ್ದೆ. ನನ್ನ ಪತಿಗೆ ಇದೆ ಎಂದು ನಾನು ನಂಬಿದ್ದ ಪ್ರಭಾವ, ಅಧಿಕಾರ ಕಂಡು ನಾನು ಧೃತಿಗೆಟ್ಟಿದ್ದೆ, ಹಾಗೂ ಸುಮ್ಮನಿರುವುದೇ ಎಲ್ಲಕ್ಕಿಂತ ಸುರಕ್ಷಿತವಾದ ಮಾರ್ಗ ಎಂದು ನನ್ನ ಮನಸ್ಸಿಗೆ ನಾನೇ ಒಪ್ಪಿಸಿಕೊಂಡಿದ್ದೆ’ ಎಂದಿದ್ದಾರೆ ಇಶಾ.
ಇದನ್ನೂ ಓದಿ: ‘ಹೌದು, ನಾನು ಬಾದ್‌ಶಾ ಪತ್ನಿ’: ಕೊನೆಗೂ ಮದುವೆ ವದಂತಿಗೆ ತೆರೆ ಎಳೆದ ನಟಿ ಇಶಾ ರಿಖಿ
‘ಮೌನ ಎನ್ನುವುದು ಎಂದಿಗೂ ಒಪ್ಪಿಗೆಯಾಗಿರಲಿಲ್ಲ. ಅದು ಕೇವಲ ಬದುಕಿ ಉಳಿಯುವ ಪ್ರಯತ್ನವಾಗಿತ್ತು. ಇಂದು, ನಾನು ಭಯದ ಬದಲು ಧೈರ್ಯವನ್ನು ಆರಿಸಿಕೊಳ್ಳುತ್ತಿದ್ದೇನೆ. ಸಂಪೂರ್ಣ ಕಥೆಯನ್ನು ಹೇಳಲು ನಾನು ಇನ್ನೂ ಸಿದ್ಧಳಾಗಿಲ್ಲದಿರಬಹುದು, ಆದರೆ ಎಲ್ಲವೂ ಸರಿಯಾಗಿದೆ ಎಂದು ನಟಿಸುವುದನ್ನು ನಿಲ್ಲಿಸಲು ಕೊನೆಗೂ ನಾನು ಸಿದ್ಧಳಾಗಿದ್ದೇನೆ’ ಎಂದು ಅವರು ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.