
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ದಿನಕ್ಕೊಂದು ಗಾಸಿಪ್ ಕೇಳಿಬರುತ್ತದೆ. ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಬಹುಭಾಷೆಯಲ್ಲಿ ನಟಿಸುತ್ತಿರುವ ಹೀರೋಯಿನ್ ಬಗ್ಗೆ ಒಂದಷ್ಟು ಅಂಕೆ-ಕಂತೆಗಳು ಹರಿದಾಡುವುದು ಸಹಜ. ಆದರೆ ಈಗ ಅವರ ನಾಯಿ ಬಗ್ಗೆಯೂ ಗಾಸಿಪ್ ಕೇಳಿಬಂದಿದೆ! ಹೌದು, ರಶ್ಮಿಕಾ ಮಂದಣ್ಣ ಅವರು ಶ್ವಾನ ಪ್ರಿಯೆ. ಔರಾ (Rashmika Mandanna dog Aura) ಎಂಬ ಹೆಣ್ಣು ನಾಯಿಯನ್ನು ಅವರು ಸಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನಾಯಿಯ ಅನೇಕ ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಈ ಶ್ವಾನದ ಬಗ್ಗೆ ಒಂದು ಗಾಸಿಪ್ (Gossip) ಹರಡಿತ್ತು. ಈ ನಾಯಿಯಿಂದಾಗಿ ನಿರ್ಮಾಪಕರಿಗೆ ತೊಂದರೆ ಆಗುತ್ತಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಪ್ರತಿಕ್ರಿಯಿಸಿದ್ದಾರೆ. ಬಹಿರಂಗವಾಗಿಯೇ ಅವರು ಸ್ಪಷ್ಟನೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಶ್ವಾನದ ಬಗ್ಗೆ ಮಾಧ್ಯಮ ಸಂಸ್ಥೆಯೊಂದು ಸುದ್ದಿ ಪ್ರಕಟಿಸಿತ್ತು. ‘ತಮ್ಮ ಜೊತೆಗೆ ಶ್ವಾನಕ್ಕೂ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಬೇಕು ಎಂದು ರಶ್ಮಿಕಾ ಡಿಮ್ಯಾಂಡ್ ಮಾಡುತ್ತಿದ್ದಾರೆ. ಯಾಕೆಂದರೆ ಅವರನ್ನು ಬಿಟ್ಟು ಆ ನಾಯಿ ಒಂದು ಕ್ಷಣವೂ ಇರುವುದಿಲ್ಲ. ಇದರಿಂದ ನಿರ್ಮಾಪಕರಿಗೆ ಹೊರೆ ಆಗುತ್ತಿದೆ’ ಎಂದು ಆ ಸುದ್ದಿಯಲ್ಲಿ ಬರೆಯಲಾಗಿತ್ತು. ಅದನ್ನು ಕಂಡು ರಶ್ಮಿಕಾ ಜೋರಾಗಿ ನಕ್ಕಿದ್ದಾರೆ.
‘ಒಂದು ವೇಳೆ ಔರಾ (ಶ್ವಾನ) ನನ್ನ ಜೊತೆ ಪ್ರಯಾಣ ಮಾಡಲಿ ಎಂದು ನೀವು ಬಯಸಿದರೂ ಕೂಡ ಆಕೆ ಬರುವುದಿಲ್ಲ. ಆಕೆ ಹೈದರಾಬಾದ್ನಲ್ಲಿಯೇ ಖುಷಿಯಾಗಿದ್ದಾಳೆ. ನಿಮ್ಮ ಕಾಳಜಿಗೆ ಧನ್ಯವಾದಗಳು’ ಎಂದು ರಶ್ಮಿಕಾ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ‘ನನಗೆ ನಗು ತಡೆಯಲು ಆಗುತ್ತಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.
ನಟಿಯರ ಬಗ್ಗೆ ಈ ರೀತಿಯ ಗಾಸಿಪ್ ಹಬ್ಬಿಸಿದರೆ ಕೆಲವೊಮ್ಮೆ ಅವರ ವೃತ್ತಿಜೀವನಕ್ಕೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ರಶ್ಮಿಕಾ ಅವರು ನಿರ್ಮಾಪಕರಿಂದ ಅನಗತ್ಯವಾಗಿ ನಾಯಿಗೂ ಖರ್ಚು ಮಾಡಿಸುತ್ತಾರೆ ಎಂಬ ಮಾತು ಹಬ್ಬಿದರೆ ಕೆಲವು ನಿರ್ಮಾಪಕರು ಅವರಿಗೆ ಆಫರ್ ನೀಡಲು ಹಿಂದೇಟು ಹಾಕಬಹುದು. ಈ ಎಲ್ಲ ಕಾರಣಗಳಿಂದಾಗಿ ಈ ಗಾಸಿಪ್ಗೆ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಶ್ವಾನಕ್ಕೆ ನಿರ್ಮಾಪಕರು ಟಿಕೆಟ್ ಮಾಡಿಸಬೇಕು ಎಂಬುದೆಲ್ಲ ಶುದ್ಧ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಶ್ಮಿಕಾ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ನಟಿಸುತ್ತಿರುವ ಹಿಂದಿಯ ‘ಗುಡ್ಬೈ’ ಸಿನಿಮಾಗೆ ಇತ್ತೀಚೆಗಷ್ಟೇ ಶೂಟಿಂಗ್ ಮುಗಿದಿದೆ. ‘ಪುಷ್ಪ 2’ ಚಿತ್ರದ ಶೂಟಿಂಗ್ ಆರಂಭವಾಗಲಿ ಎಂದು ರಶ್ಮಿಕಾ ಕಾಯುತ್ತಿದ್ದಾರೆ.
ಇದನ್ನೂ ಓದಿ: No Entry 2: ಸಲ್ಮಾನ್ ಖಾನ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಸಮಂತಾ? ‘ನೋ ಎಂಟ್ರಿ’ಯಲ್ಲೂ ಸಿಗಬಹುದು ಎಂಟ್ರಿ
Published On - 9:08 am, Sat, 25 June 22