
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಜನಪ್ರಿಯತೆಯ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲು ಕರ್ನಾಟಕಕ್ಕೆ ಸೀಮಿತವಾಗಿದ್ದ ಅವರು ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ತಮಿಳು ಚಿತ್ರರಂಗ ಕೂಡ ಕೈ ಬೀಸಿ ಕರೆಯಿತು. ಆ ನಂತರ ಅವರಿಗೆ ಬಾಲಿವುಡ್ ಕಡೆಯಿಂದ ಬುಲಾವ್ ಬಂತು. ಅಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ ರಶ್ಮಿಕಾ (Rashmika) ಸೈ ಎನಿಸಿಕೊಂಡರು. ಈಗ ಅವರು ಹಲವು ಪ್ರತಿಷ್ಠಿತ ಮ್ಯಾಗಜಿನ್ ಮುಖಪುಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಡರ್ಟಿ ಕಟ್ 25’ (Dirty Cut 25) ಮ್ಯಾಗಜಿನ್ ಮುಖಪುಟಕ್ಕಾಗಿ ಈಗ ರಶ್ಮಿಕಾ ಮಂದಣ್ಣ ಮಾಡಿಸಿರುವ ಫೋಟೋಶೂಟ್ ಗಮನ ಸೆಳೆಯುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಒಮ್ಮೆಲೇ ನೋಡಿದರೆ ಇದು ರಶ್ಮಿಕಾ ಮಂದಣ್ಣ ಅಂತ ಗುರುತೇ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಈ ಗೆಟಪ್ ಭಿನ್ನವಾಗಿದೆ. ಕಡುಗೆಂಪು ಬಣ್ಣದ ಲಿಪ್ಸ್ಟಿಕ್ ಹಚ್ಚಿಕೊಂಡು ಅವರು ಕಾಣಿಸಿಕೊಂಡಿದ್ದಾರೆ. ಹೇರ್ ಸ್ಟೈಲ್ ಕೂಡ ಭಿನ್ನವಾಗಿದೆ. ಅಭಿಮಾನಿಗಳಿಗೆ ನಟಿಯ ಈ ಗೆಟಪ್ ಇಷ್ಟ ಆಗಿದೆ. ನಟಿ ಅಮಲಾ ಪೌಲ್ ಕೂಡ ಈ ಲುಕ್ ನೋಡಿ ಮೆಚ್ಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಹಲವು ಬಗೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಆದರೆ ಈ ಗೆಟಪ್ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಹಾಗಾಗಿ ಅಭಿಮಾನಿಗಳು ಅಚ್ಚರಿಯಿಂದ ನೋಡುತ್ತಿದ್ದಾರೆ. ಫ್ಯಾಷನ್ಗೆ ಸಂಬಂಧಿಸಿದ ‘ಡರ್ಟಿ ಕಟ್ 25’ ಮ್ಯಾಗಜಿನ್ ರಶ್ಮಿಕಾ ಅವರನ್ನು ಪರಿಪರಿಯಾಗಿ ಹೊಗಳಿದೆ. ಚಿತ್ರರಂಗದಲ್ಲಿ ರಶ್ಮಿಕಾ ಮಾಡಿರುವ ಸಾಧನೆಯನ್ನು ಕೊಂಡಾಡಲಾಗಿದೆ.
ಬಾಲಿವುಡ್ ಮಂದಿಯ ಪಾಲಿಗೆ ರಶ್ಮಿಕಾ ಮಂದಣ್ಣ ಅವರು ಫೇವರಿಟ್ ನಟಿ ಆಗಿದ್ದಾರೆ. ಅನೇಕ ಹೀರೋಗಳಿಗೆ ಅವರು ಲಕ್ಕಿ ಹೀರೋಯಿನ್ ಎನಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ನಟಿಸಿದ ‘ಪುಷ್ಪ 2’ ಸಿನಿಮಾ ಹಿಂದಿಯಲ್ಲೂ ಧೂಳೆಬ್ಬಿಸಿತು. ‘ಅನಿಮಲ್’, ‘ಛಾವ’ ಸಿನಿಮಾಗಳು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಹೀಗೆ ರಶ್ಮಿಕಾ ಮಂದಣ್ಣ ಅವರು ಭರ್ಜರಿಯಾಗಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ: ಕೊಡಗಿನಿಂದ ಬಂದು ಚಿತ್ರರಂಗದಲ್ಲಿ ಮಿಂಚಿದ ಮೊದಲ ನಟಿ ರಶ್ಮಿಕಾ ಮಂದಣ್ಣ ಅಲ್ಲ
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಹೊಸ ವಿವಾದ ಮಾಡಿಕೊಂಡರು. ‘ಕೊಡಗಿನಿಂದ ಚಿತ್ರರಂಗಕ್ಕೆ ಬಂದ ಮೊದಲ ನಟಿ ನಾನು’ ಎಂದು ಅವರು ಹೇಳಿದ್ದರು. ಆ ಹೇಳಿಕೆಯನ್ನು ಅನೇಕರು ಖಂಡಿಸಿದರು. ಪ್ರೇಮಾ, ಹರ್ಷಿಕಾ ಪೂಣಚ್ಚ, ಶ್ವೇತಾ ಚಂಗಪ್ಪ, ಅಶ್ವಿನಿ ನಾಚಪ್ಪ ಅವರಂತಹ ಸೆಲೆಬ್ರಿಟಿಗಳು ರಶ್ಮಿಕಾಗಿಂತಲೂ ಮೊದಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಆ ವಿಷಯ ತಿಳಿದಿದ್ದರೂ ರಶ್ಮಿಕಾ ಮಂದಣ್ಣ ಅವರು ಇಂಥ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:26 pm, Tue, 8 July 25