ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾದ ಬಳಿಕ ಸುಳ್ಳು ಸುದ್ದಿಗಳ ಹರಡುವಿಕೆ ಕೂಡ ಹೆಚ್ಚಾಗಿದೆ. ಸೆಲೆಬ್ರಿಟಿಗಳ ಆರೋಗ್ಯದ ಬಗ್ಗೆ ಕೆಲವು ಕಿಡಿಗೇಡಿಗಳು ಆಗಾಗ ವದಂತಿ ಹಬ್ಬಿಸುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಇದು ಅತಿಯಾಗಿದೆ. ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂಬ ಅನುಮಾನ ಅಭಿಮಾನಿಗಳನ್ನು ಕಾಡುತ್ತದೆ. ನಟಿ ಸಮಂತಾ ರುತ್ ಪ್ರಭು ಅವರ ಆರೋಗ್ಯ (Samantha Health) ಪೂರ್ತಿಯಾಗಿ ಸುಧಾರಿಸಿಲ್ಲ ಎಂಬುದು ಗೊತ್ತಿರುವ ವಿಚಾರ. ಈ ನಡುವೆಯೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ ಅವರಿಗೆ ಏನೂ ಗಂಭೀರ ಸಮಸ್ಯೆ ಇಲ್ಲ ಎಂದು ಆಪ್ತ ಮೂಲಗಳು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಒಟ್ಟಿನಲ್ಲಿ ಸಮಂತಾ (Samantha Ruth Prabhu) ಅಭಿಮಾನಿಗಳಂತೂ ಗೊಂದಲಕ್ಕೆ ಸಿಲುಕಿದ್ದಾರೆ.
ಸಮಂತಾ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅವರು ಕೇವಲ ಟಾಲಿವುಡ್ಗೆ ಸೀಮಿತವಾಗಿಲ್ಲ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ನಲ್ಲಿ ನಟಿಸಿದ ಬಳಿಕ ಅವರು ಉತ್ತರ ಭಾರತದಲ್ಲಿ ಹೆಚ್ಚು ಫೇಮಸ್ ಆದರು. ‘ಪುಷ್ಪ 2’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ ಬಳಿಕ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡರು. ಈಗ ಅವರ ಕೈಯಲ್ಲಿ ಅನೇಕ ಆಫರ್ಗಳಿವೆ. ಆದರೆ ಅವರ ವೇಗಕ್ಕೆ ಅನಾರೋಗ್ಯದಿಂದ ಬ್ರೇಕ್ ಬಿದ್ದಿದೆ.
Myositis ಎಂಬ ಆರೋಗ್ಯ ಸಮಸ್ಯೆಯಿಂದ ಸಮಂತಾ ಬಳಲುತ್ತಿದ್ದಾರೆ ಎಂಬುದು ನಿಜ. ಅದರ ಸಲುವಾಗಿ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ಹಂತಕ್ಕೆ ಗುಣಮುಖರಾದ ಬಳಿಕ ‘ಯಶೋದಾ’ ಚಿತ್ರದ ಕೆಲಸಗಳಲ್ಲಿ ಪಾಲ್ಗೊಂಡರು. ಅಂತೂ ಆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಅಭಿಮಾನಿಗಳ ಗಮನ ಸೆಳೆದಿದೆ. ‘ಯಶೋದಾ’ ಚಿತ್ರದ ಗೆಲುವನ್ನು ಸಂಭ್ರಮಿಸುತ್ತಿರುವಾಗಲೇ ಅನಾರೋಗ್ಯದ ಬಗ್ಗೆ ವದಂತಿ ಹಬ್ಬಿದೆ.
ಈ ಹಿಂದೆ ಕೆಲವು ಯೂಟ್ಯೂಬ್ ಚಾನೆಲ್ಗಳು ಸಮಂತಾ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಬಿತ್ತರ ಮಾಡಿದ್ದವು. ಇದರಿಂದ ಸಮಂತಾ ವೃತ್ತಿಜೀವನಕ್ಕೆ ತೊಂದರೆ ಆಗುವಂತಿತ್ತು. ಹಾಗಾಗಿ ಅವರು ಅಂಥ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಈಗ ಮತ್ತೆ ಸಮಂತಾ ಕುರಿತು ಗಾಸಿಪ್ ಹಬ್ಬಿರುವುದರಿಂದ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬ ಕೌತುಕ ಮನೆ ಮಾಡಿದೆ.
ವಿಜಯ್ ದೇವರಕೊಂಡ ಜೊತೆ ಸಮಂತಾ ಅವರು ಖುಷಿ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ‘ಶಾಕುಂತಲಂ’ ಸಿನಿಮಾಗೆ ಕೊನೇ ಹಂತದ ಪೋಸ್ಟ್ ಕೆಲಸಗಳು ನಡೆಯುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:25 pm, Thu, 24 November 22