ಅಲ್ಲು ಅರ್ಜುನ್-ಪವನ್ ಕಲ್ಯಾಣ್ ನಡುವೆ ಮುನಿಸು, ಸ್ಪಷ್ಟನೆ ಕೊಟ್ಟ ‘ಪುಷ್ಪ’ ನಿರ್ಮಾಪಕ

|

Updated on: Oct 25, 2024 | 11:19 AM

ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಕೆಲವೇ ದಿನಗಳಲ್ಲಿ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದ್ದು, ಅಲ್ಲು ಅರ್ಜುನ್ ಹಾಗೂ ಪವನ್ ನಡುವಿನ ಭಿನ್ನಾಭಿಪ್ರಾಯದಿಂದ ಸಿನಿಮಾಕ್ಕೆ ಹಾನಿ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ‘ಪುಷ್ಪ’ ನಿರ್ಮಾಪಕರು ಮಾತನಾಡಿದ್ದಾರೆ.

ಅಲ್ಲು ಅರ್ಜುನ್-ಪವನ್ ಕಲ್ಯಾಣ್ ನಡುವೆ ಮುನಿಸು, ಸ್ಪಷ್ಟನೆ ಕೊಟ್ಟ ‘ಪುಷ್ಪ’ ನಿರ್ಮಾಪಕ
Follow us on

ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ಒಂದೇ ಕುಟುಂಬಕ್ಕೆ ಸೇರಿದವರಾದರೂ ಇಬ್ಬರ ನಡುವೆ ಮುನಿಸು ಮೂಡಿದೆ. ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಲ್ಲುಅರ್ಜುನ್, ಪವನ್ ಕಲ್ಯಾಣ್ ಅನ್ನು ಬಿಟ್ಟು ಪವನ್​ ಕಲ್ಯಾಣ್​ರ ಎದುರಾಳಿ ಪಕ್ಷವಾದ ವೈಸಿಪಿಯ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದು ಇಬ್ಬರ ನಡುವಿನ ಮುನಿಸಿಗೆ ಕಾರಣವಾಗಿದೆ. ಆ ಘಟನೆ ನಡೆದ ಬಳಿಕವೂ ಸಹ ಇಬ್ಬರೂ ಪರಸ್ಪರರ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಪರೋಕ್ಷವಾಗಿ ಋಣಾತ್ಮಕವಾಗಿ ಮಾತನಾಡಿರುವುದು ಬಿರುಕು ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಪವನ್ ಹಾಗೂ ಅಲ್ಲು ಅರ್ಜುನ್ ನಡುವಿನ ಮುನಿಸು ‘ಪುಷ್ಪ 2’ ಸಿನಿಮಾ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ನಡುವೆ ‘ಪುಷ್ಪ 2’ ಸಿನಿಮಾದ ನಿರ್ಮಾಪಕರೊಬ್ಬರು ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ನಡುವಿನ ಮುನಿಸಿನ ಬಗ್ಗೆ ಮಾತನಾಡಿದ್ದಾರೆ. ‘ಚುನಾವಣೆ ಸಮಯದಲ್ಲಿ ಕೆಲವು ಸಣ್ಣ ಪುಟ್ಟ ಘಟನೆಗಳು ನಡೆದಿದ್ದವು. ಆದರೆ ಅದೆಲ್ಲವೂ ನಡೆದು ಹೋದ ಸಂಗತಿಗಳು, ಈಗ ಅವಕ್ಕೆ ಪ್ರಾಮುಖ್ಯತೆ ಇಲ್ಲ. ಅವರೆಲ್ಲರೂ (ಮೆಗಾ ಕುಟುಂಬ) ಆರಾಮಾವಾಗಿದ್ದಾರೆ. ಅಭಿಮಾನಿಗಳು ಸಹ ಈ ಬಗ್ಗೆ ಹೆಚ್ಚು ತಲೆಕಡೆಸಿಕೊಳ್ಳಬಾರದು’ ಎಂದಿದ್ದಾರೆ ಮೈತ್ರಿ ನಿರ್ಮಾಣ ಸಂಸ್ಥೆಯ ಸಹ ನಿರ್ಮಾಪಕ ನವೀನ್ ಯೆರಿನೇನಿ.

‘ಅಲ್ಲು ಅರ್ಜುನ್ ಈ ಹಿಂದೆಯೂ ಸಹ ತಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಂದ್ಯಾಲ್ ಕ್ಷೇತ್ರದಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸಲು ಅವರು ಹೋಗಿರಲಿಲ್ಲ ಬದಲಿಗೆ ತಮ್ಮ ಗೆಳೆಯನಿಗೆ ಬೆಂಬಲ ನೀಡಲಷ್ಟೆ ಅವರು ಹೋಗಿದ್ದರು’ ಎಂದು ಮೈತ್ರಿಯ ಮತ್ತೊಬ್ಬ ನಿರ್ಮಾಪಕ ರವಿ ಯಲಮಚಿಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಆಂಧ್ರ ಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ ಅಲ್ಲು ಅರ್ಜುನ್: ಕಾರಣ?

‘ನಾವು ಈ ಹಿಂದೆ ‘ಕಲ್ಕಿ 2898 ಎಡಿ’ ಸಿನಿಮಾದ ಟಿಕೆಟ್ ದರ ಹೆಚ್ಚಳ, ಫ್ಯಾನ್ಸ್ ಶೋ ಇನ್ನಿತರೆಗಳಿಗೆ ಅನುಮತಿ ಕೇಳುವ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರನ್ನು ಭೇಟಿ ಆಗಿದ್ದೆವು. ಆಗೆಲ್ಲ ಅವರು ಬಹಳ ಆಪ್ತವಾಗಿ ನಡೆದುಕೊಂಡರು, ನಮಗೆ ಸಾಕಷ್ಟು ಬೆಂಬಲ ನೀಡಿದರು. ಒಳ್ಳೆಯ ಸಿನಿಮಾಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ ಈಗ ‘ಪುಷ್ಪ 2’ ಸಿನಿಮಾಕ್ಕೂ ಸಹ ಅವರು ಬೆಂಬಲ ನೀಡುವ ನಿರೀಕ್ಷೆ ಇದೆ’ ಎಂದಿದ್ದಾರೆ.

‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ರಂದು ಬಿಡುಗಡೆ ಆಗುತ್ತಿದ್ದು, ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಟಿಕೆಟ್ ದರ ಹೆಚ್ಚಳ ಮಾಡಿಕೊಳ್ಳಲು, ಹೆಚ್ಚುವರಿ ಶೋಗಳನ್ನು ಹಾಕಿಕೊಳ್ಳಲು ಸರ್ಕಾರದ ವಿಶೇಷ ಅನುಮತಿ ಪಡೆಯಬೇಕಿದೆ. ಆಂಧ್ರ ಹಾಗೂ ತೆಲಂಗಾಣ ಎರಡರಲ್ಲೂ ಈ ನಿಯಮ ಜಾರಿಯಲ್ಲಿದೆ. ಅಲ್ಲು ಅರ್ಜುನ್, ಡಿಸಿಎಂ ಪವನ್ ಕಲ್ಯಾಣ್ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದ್ದು, ಈ ಭಿನ್ನಾಭಿಪ್ರಾಯದಿಂದಾಗಿ ‘ಪುಷ್ಪ 2’ ಸಿನಿಮಾದ ಟಿಕೆಟ್ ಹೆಚ್ಚಳಕ್ಕೆ ಅನುಮತಿ ಸಿಗದೇ ಹೋಗಬಹುದು ಎಂಬ ಆತಂಕ ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ