‘ಟಿವಿಯಿಂದ ಸಂಪಾದಿಸಿದ್ದ ನೂರಾರು ಕೋಟಿ ಹಣ, ಸಿನಿಮಾದಿಂದ ಹೋಗಿತ್ತು’

Kapil Sharma: ಕಪಿಲ್ ಶರ್ಮಾ, ಭಾರತೀಯ ಟಿವಿ ಲೋಕದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಸೆಲೆಬ್ರಿಟಿ. ಅವರ ಆಸ್ತಿ ಮೌಲ್ಯ 300 ಕೋಟಿಗೂ ಹೆಚ್ಚಿತ್ತು. ಆದರೆ ಸಿನಿಮಾಗಳ ತಂಟೆಗೆ ಹೋಗಿ ಇದ್ದ ಹಣವನ್ನೆಲ್ಲ ಕಳೆದುಕೊಂಡಿದ್ದರು ಕಪಿಲ್.

‘ಟಿವಿಯಿಂದ ಸಂಪಾದಿಸಿದ್ದ ನೂರಾರು ಕೋಟಿ ಹಣ, ಸಿನಿಮಾದಿಂದ ಹೋಗಿತ್ತು’
Follow us
ಮಂಜುನಾಥ ಸಿ.
|

Updated on: Oct 25, 2024 | 12:09 PM

ಕಪಿಲ್ ಶರ್ಮಾ ಬಾಲಿವುಡ್​ನ ದೊಡ್ಡ ಸೆಲೆಬ್ರಿಟಿಗಳ ಸಾಲಿನಲ್ಲಿ ಪರಿಗಣಿತವಾಗುವ ವ್ಯಕ್ತಿ. ಕಪಿಲ್ ಶರ್ಮಾ ಶೋ ಭಾರತೀಯ ಟಿವಿ ಕ್ಷೇತ್ರದ ಅತ್ಯಂತ ಜನಪ್ರಿಯ ಶೋ. ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಕಪಿಲ್ ಶರ್ಮಾ ಟಿವಿಯಲ್ಲಿ ಕಾಮಿಡಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಅವರ ಶೋ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆಗುತ್ತಿದೆ. ಟಿವಿ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಲಾವಿದ ಎಂಬ ಖ್ಯಾತಿಗೂ ಕಪಿಲ್ ಶರ್ಮಾ ಪಾತ್ರರಾಗಿದ್ದಾರೆ. ಟಿವಿಯಿಂದ ನೂರಾರು ಕೋಟಿ ಸಂಪಾದಿಸಿದ್ದ ಕಪಿಲ್ ಶರ್ಮಾ, ಸಿನಿಮಾಗಳ ತಂಟೆಗೆ ಹೋಗಿ ಇರುವುದೆಲ್ಲವನ್ನೂ ಕಳೆದುಕೊಂಡಿದ್ದರಂತೆ.

‘ಫೀಲ್ ಇಟ್ ಇನ್ ಯುವರ್ ಸೋಲ್’ ಹೆಸರಿನ ಯೂಟ್ಯೂಬ್ ಪಾಡ್​ಕಾಸ್ಟ್​ಗೆ ಆಗಮಿಸಿದ್ದ ಕಪಿಲ್ ಶರ್ಮಾ, ತಮ್ಮ ಜೀವನದ ಕಹಿ ಘಟನೆಗಳ ಬಗ್ಗೆ ಅಲ್ಲಿ ಮಾತನಾಡಿದ್ದಾರೆ. ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿರುವ ಕಪಿಲ್ ಶರ್ಮಾ, ‘ಕೇವಲ 1200 ರೂಪಾಯಿ ಜೇಬಿನಲ್ಲಿ ಇಟ್ಟುಕೊಂಡು ಮುಂಬೈಗೆ ಬಂದಿದ್ದೆ. ಎಷ್ಟೋ ದಿನಗಳ ಕಾಲ ದಿನದ ಒಂದು ಹೊತ್ತು ಊಟಕ್ಕೂ ಸಹ ಕಷ್ಟಪಟ್ಟಿದ್ದೆ’ ಎಂದು ಕಪಿಲ್ ಶರ್ಮಾ ಪಾಡ್​ಕಾಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

‘ನನ್ನ ಬಳಿ ಸಾಕಷ್ಟು ಹಣ ಇತ್ತು, ಇಷ್ಟೋಂದು ಹಣ ಇದ್ದರೆ ಆರಾಮವಾಗಿ ನಾನು ಸಿನಿಮಾ ನಿರ್ಮಾಪಕ ಆಗಬಹುದು ಎಂದುಕೊಂಡು ತಲೆಕೆಟ್ಟು ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿಬಿಟ್ಟೆ. ಆದರೆ ಆ ಬಳಿಕ ನನಗೆ ಗೊತ್ತಾಯ್ತು, ಕೇವಲ ಹಣ ಇದ್ದರೆ ನಿರ್ಮಾಪಕ ಆಗಲು ಸಾಧ್ಯವಿಲ್ಲ. ನಿರ್ಮಾಪಕ ಆಗಲು ಬೇರೆಯದ್ದೇ ರೀತಿಯ ಆಲೋಚನೆ, ಫ್ಯಾಷನ್, ಜ್ಞಾನ ಇರಬೇಕು ಎಂಬುದು ಅರ್ಥವಾಯ್ತು’ ಎಂದಿದ್ದಾರೆ.

ಇದನ್ನೂ ಓದಿ:ಕಪಿಲ್ ಶರ್ಮಾ ಬಗ್ಗೆ ‘ಶಕ್ತಿಮಾನ್’ ಮಖೇಶ್​ಗೆ ಯಾಕಿಷ್ಟು ಕೋಪ? ಎರಡು ಘಟನೆ ಅವರ ಆಲೋಚನೆ ಬದಲಿಸಿತು

‘ನನ್ನ ಬಳಿ ಇದ್ದ ದುಡ್ಡನ್ನೆಲ್ಲ ಹಾಕಿ ಸಿನಿಮಾ ನಿರ್ಮಾಣ ಮಾಡಿದೆ. ಹಾಕಿದ ದುಡ್ಡೆಲ್ಲ ಖಾಲಿ ಆಯ್ತು, ಸಿನಿಮಾದಿಂದ ಗಳಿಕೆ ಬರಲೇ ಇಲ್ಲ, ನನ್ನ ಬ್ಯಾಂಕ್ ಖಾತೆ ಸೊನ್ನೆ ಆಗಿಹೋಯ್ತು. ಇದು ನನ್ನನ್ನು ಆಘಾತಕ್ಕೆ ತಳ್ಳಿತು. ಗಳಿಸಿದ ದುಡ್ಡನ್ನೆಲ್ಲ ಕಳೆದುಕೊಂಡು ಬಿಟ್ಟಿದ್ದೆ. ಇದರಿಂದಾಗಿ ನಾನು ಖಿನ್ನತೆಗೆ ಜಾರಿಬಿಟ್ಟೆ, ಆರೋಗ್ಯ ಸಂಪೂರ್ಣವಾಗಿ ಹಾಳಾಯ್ತು’ ಎಂದಿದ್ದಾರೆ ಕಪಿಲ್ ಶರ್ಮಾ. ‘ನನ್ನ ಸಂಕಷ್ಟದ ಸಮಯದಲ್ಲಿ ನನ್ನ ಪತ್ನಿ ಗಿನ್ನಿ ನನಗೆ ಸಾಕಷ್ಟು ಸಹಾಯ ಮಾಡಿದರು. ಹಣ ಕಳೆದುಕೊಂಡಿದ್ದು ಮಾತ್ರವೇ ಅಲ್ಲದೆ ಬೇರೆ ಕೆಲವು ಸಂಗತಿಗಳು ಸಹ ನನ್ನನ್ನು ಖಿನ್ನತೆಗೆ ದೂಡಿದ್ದವು’ ಎಂದಿದ್ದಾರೆ.

‘ಆಗಿದ್ದೆಲ್ಲ ಒಳ್ಳೆಯದಕ್ಕೇ ಆಯ್ತು, ನಾನು ಅದರಿಂದ ದೊಡ್ಡ ಪಾಠಗಳನ್ನು ಕಲಿತೆ. ಈಗ ನಾನು ಮತ್ತೆ ಸರಿದಾರಿಗೆ ಮರಳಿದ್ದೇನೆ’ ಎಂದಿದ್ದಾರೆ ಕಪಿಲ್ ಶರ್ಮಾ. ಟಿವಿ ಲೋಕದ ಜನಪ್ರಿಯ ತಾರೆ ರೂಪಾಲಿ ಗಂಗೂಲಿಯನ್ನು ಹಿಂದಿಕ್ಕಿ ಭಾರಿ ಶ್ರೀಮಂತ ಟಿವಿ ಸ್ಟಾರ್ ಎನಿಸಿಕೊಂಡಿದ್ದರು ಕಪಿಲ್ ಶರ್ಮಾ. ಅವರ ಆಸ್ತಿ ಮೌಲ್ಯ 300 ಕೋಟಿಗೂ ಹೆಚ್ಚಿತ್ತು. ಈಗ ಮತ್ತೆ ಕಳೆದುಕೊಂಡಿದ್ದನ್ನೆಲ್ಲ ಮರಳಿ ಗಳಿಸಿಕೊಂಡಿದ್ದಾರೆ. ಅವರ ಮುಂದಾಳತ್ವದಲ್ಲಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ