ಸಿಎಂ ವಿಜಯ್ ಭೇಟಿ ಮಾಡಿದ ‘ಕರುಪ್ಪು’ ಸಿನಿಮಾದ ನಿರ್ದೇಶಕ ಆರ್.ಜೆ. ಬಾಲಾಜಿ

ದಳಪತಿ ವಿಜಯ್ ಅವರು ಸಿಎಂ ಆದ ಬಳಿಕ ಅವರನ್ನು ಅನೇಕರು ಭೇಟಿ ಮಾಡುತ್ತಿದ್ದಾರೆ. ಚಿತ್ರರಂಗದ ಹಲವು ನಿರ್ದೇಶಕರು ವಿಜಯ್ ಅವರನ್ನು ಭೇಟಿ ಆಗುತ್ತಿರುವುದು ವಿಶೇಷ. ಈಗ ಬ್ಲಾಕ್ ಬಸ್ಟರ್ ‘ಕರುಪ್ಪು’ ಸಿನಿಮಾದ ನಿರ್ದೇಶಕ ಆರ್.ಜೆ. ಬಾಲಾಜಿ ಕೂಡ ಸಿಎಂ ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

ಸಿಎಂ ವಿಜಯ್ ಭೇಟಿ ಮಾಡಿದ ‘ಕರುಪ್ಪು’ ಸಿನಿಮಾದ ನಿರ್ದೇಶಕ ಆರ್.ಜೆ. ಬಾಲಾಜಿ
Cm Vijay, Rj Balaji

Updated on: Jun 02, 2026 | 10:39 PM

ಆರ್.ಜೆ. ಬಾಲಾಜಿ (RJ Balaji) ನಿರ್ದೇಶನದ, ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕರುಪ್ಪು’ (Karuppu) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಮೇ 15ರಂದು ಬಿಡುಗಡೆಯಾಗಿದ್ದ ಈ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಈ ದೊಡ್ಡ ಯಶಸ್ಸಿನ ನಡುವೆ, ನಿರ್ದೇಶಕ ಆರ್.ಜೆ. ಬಾಲಾಜಿ ಅವರು ಮಂಗಳವಾರ (ಜೂನ್ 2) ತಮಿಳುನಾಡಿನ ನೂತನ ಮುಖ್ಯಮಂತ್ರಿ ಮತ್ತು ಸ್ಟಾರ್ ನಟ ಸಿ. ಜೋಸೆಫ್ ವಿಜಯ್ (CM Vijay) ಅವರನ್ನು ಭೇಟಿ ಮಾಡಿದ್ದಾರೆ.

ವಿಜಯ್ ಅವರನ್ನು ಸಿಎಂ ಸ್ಥಾನದಲ್ಲಿ ನೋಡಿ ಖುಷಿಪಟ್ಟ ಬಾಲಾಜಿ, ಆ ಕ್ಷಣವನ್ನು ‘ಅದ್ಭುತ ’ ಎಂದು ಬಣ್ಣಿಸಿದ್ದಾರೆ. ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವಿಜಯ್ ಜೊತೆಗಿನ ಎರಡು ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಭೇಟಿಯ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ‘ಕರುಪ್ಪು ಚಿತ್ರಕ್ಕೆ ಎಲ್ಲವನ್ನೂ ಮೊದಲಿಗೆ ಆರಂಭಿಸಿಕೊಟ್ಟ ವ್ಯಕ್ತಿಯ ಜೊತೆ! ವಾವ್… ಅವರನ್ನು ಈಗ ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಯಾಗಿ ಭೇಟಿ ಮಾಡುತ್ತಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ಅದೇ ಪ್ರೀತಿ, ಆತ್ಮೀಯತೆ, ದಯೆ ಮತ್ತು ಶಾಂತತೆ. ಎಲ್ಲದಕ್ಕೂ ಧನ್ಯವಾದಗಳು ಪ್ರೀತಿಯ ವಿಜಯ್ ಸರ್’ ಎಂದು ಬಾಲಾಜಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರ್.ಜೆ. ಬಾಲಾಜಿ ಅವರು ಒಂದು ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದರು. ‘ಕರುಪ್ಪು’ ಚಿತ್ರದ ಕಥೆಯನ್ನು ಅವರು ಮೊದಲು ಸಿದ್ಧಪಡಿಸಿದ್ದು ನಟ ವಿಜಯ್ ಅವರಿಗಾಗಿ! ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ನಟಿಸಬೇಕಿದ್ದ ಕೊನೆಯ ಸಿನಿಮಾ ಇದಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.

ಆರ್.ಜೆ. ಬಾಲಾಜಿ ಪೋಸ್ಟ್:

‘ಇದು ಅವರ ಕೊನೆಯ ಚಿತ್ರವಾಗಬೇಕಿದ್ದರಿಂದ, ಅವರ ರಾಜಕೀಯ ಪ್ರವೇಶ ಮತ್ತು ಕೊನೆಯ ಪ್ರಾಜೆಕ್ಟ್ ಯಾವ ರೀತಿಯಲ್ಲಿ ಇರಬೇಕು ಎಂಬುದರ ಕುರಿತು ನಾವು ಎರಡು-ಮೂರು ಬಾರಿ ಸುದೀರ್ಘ ಸಭೆ ನಡೆಸಿ ಚರ್ಚಿಸಿದ್ದೆವು’ ಎಂದು ಬಾಲಾಜಿ ತಿಳಿಸಿದ್ದಾರೆ. ಆದರೆ, ಕೆಲವು ರಾಜಕೀಯ ನಿರ್ಧಾರಗಳಿಂದಾಗಿ ವಿಜಯ್ ಈ ಪ್ರಾಜೆಕ್ಟ್‌ನಿಂದ ಹೊರಗುಳಿಯಬೇಕಾಯಿತು.

ಇದನ್ನೂ ಓದಿ: ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಗರಾಜ್: ‘ಲಿಯೋ 2’ ನಿರೀಕ್ಷೆಯಲ್ಲಿ ಅಭಿಮಾನಿಗಳು

‘ಅವರು ಚಿತ್ರದಿಂದ ಹಿಂದೆ ಸರಿಯಲು ನೀಡಿದ ಕಾರಣಗಳು ಸಂಪೂರ್ಣವಾಗಿ ನ್ಯಾಯಸಮ್ಮತವಾಗಿದ್ದವು. ನಾನು ಅವರ ನಿರ್ಧಾರವನ್ನು ಗೌರವಿಸಿದೆ. ಅವರು ಸ್ವತಃ ನನ್ನ ಬಳಿ ಕಥೆ ಕೇಳಿ, ನನ್ನ ಕ್ರಿಯೇಟಿವಿಟಿಗೆ ಅಷ್ಟೊಂದು ಗೌರವ ನೀಡಿದ್ದೇ ನನಗೆ ದೊಡ್ಡ ವಿಷಯವಾಗಿತ್ತು’ ಎಂದು ಬಾಲಾಜಿ ಹೇಳಿದ್ದಾರೆ. ಮತ್ತೆ ವಿಜಯ್ ಅವರು ಸಿನಿಮಾ ಮಾಡುವುದಿಲ್ಲ. ಈಗ ಅವರು ಫುಲ್ ಟೈಮ್ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us