
ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ನಟನೆಯ ‘ಆರ್ಆರ್ಆರ್’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಲಾಕ್ಡೌನ್ ಮುಗಿದ ಬಳಿಕ ಚಿತ್ರದ ಶೂಟಿಂಗ್ಗೆ ಚುರುಕು ಮುಟ್ಟಿಸಲಾಗಿದೆ. ರಾಜಮೌಳಿ (Rajamouli) ಸಾರಥ್ಯದಲ್ಲಿ ಆರ್ಆರ್ಆರ್ (RRR) ಮೂಡಿಬರುತ್ತಿದ್ದು, ಈಗ ಅದರ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಜು.15ರಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಆಗಿರುವ ಈ ವಿಡಿಯೋ (Roar of RRR) ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರಿಂದ ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ.
ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದ್ದೂರಿತನಕ್ಕೆ ಹೆಸರುವಾಸಿ ಆಗಿರುತ್ತವೆ. ಬೃಹತ್ ಸೆಟ್ಗಳು, ದೊಡ್ಡ ತಾರಾಗಣ, ಬಹುಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ತಯಾರಾಗುತ್ತದೆ. ಹಾಗಾಗಿ ತೆರೆಹಿಂದಿನ ವಿಷಯಗಳನ್ನು ತಿಳಿದುಕೊಳ್ಳಲು ಸಿನಿಪ್ರಿಯರು ಸದಾ ಆಸಕ್ತಿ ತೋರುತ್ತಾರೆ. ಅಂಥವರ ಮನ ತಣಿಸಲು ಈ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಐತಿಹಾಸಿಕ ಕಥಾಹಂದರ ಇರುವ ಈ ಚಿತ್ರ ದೊಡ್ಡ ಕ್ಯಾನ್ವಾಸ್ನಲ್ಲಿ ಮೂಡಿಬರುತ್ತಿದೆ. ‘ಬಾಹುಬಲಿ’ ರೀತಿಯ ದೈತ್ಯ ಸಿನಿಮಾವನ್ನು ಕಟ್ಟಿಕೊಟ್ಟ ತಂಡವೇ ‘ಆರ್ಆರ್ಆರ್’ ಚಿತ್ರಕ್ಕಾಗಿ ಶ್ರಮಿಸುತ್ತಿದೆ. ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಈ ಸಿನಿಮಾದಲ್ಲಿ ಹೈಲೈಟ್ ಆಗಲಿದೆ. ವಿದೇಶಿ ಕಲಾವಿದರು ಕೂಡ ಬಣ್ಣ ಹಚ್ಚಿದ್ದಾರೆ. ಈ ಎಲ್ಲ ಅಂಶಗಳ ಝಲಕ್ ತೋರಿಸಲು ಮೇಕಿಂಗ್ ವಿಡಿಯೋ ಹೊರಬಂದಿದೆ. ತೆರೆ ಹಿಂದೆ ಇಡೀ ತಂಡ ಎಷ್ಟು ಕಷ್ಟಪಟ್ಟಿದೆ ಎಂಬುದನ್ನು ಈ ಮೇಕಿಂಗ್ ವಿಡಿಯೋ ಮೂಲಕ ನೋಡಬಹುದಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಕೊಮರಾಮ್ ಭೀಮ್ ಪಾತ್ರಕ್ಕೆ ಜ್ಯೂ. ಎನ್ಟಿಆರ್ ಬಣ್ಣ ಹಚ್ಚಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸುತ್ತಿದ್ದು, ಇದು ದಕ್ಷಿಣ ಭಾರತದಲ್ಲಿ ಅವರಿಗೆ ಮೊದಲ ಸಿನಿಮಾ. ಅಜಯ್ ದೇವಗನ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅ.13ರಂದು ಆರ್ಆರ್ಆರ್ ರಿಲೀಸ್ ಮಾಡಲು ಉದ್ದೇಶಿಸಲಾಗಿದೆ. ಅಂದುಕೊಂಡ ದಿನಾಂಕದಲ್ಲೇ ಸಿನಿಮಾವನ್ನು ತೆರೆಕಾಣಿಸಬೇಕು ಎಂದು ಇಡೀ ತಂಡ ಶ್ರಮವಹಿಸುತ್ತಿದೆ.
ಇದನ್ನೂ ಓದಿ:
ರಾಮ್ ಚರಣ್ Vs ಜ್ಯೂ. ಎನ್ಟಿಆರ್; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್ ಏನು?
ಆರ್ಆರ್ಆರ್ ಚಿತ್ರದ ಒಂದು ಹಾಡಿನ ಶೂಟ್ಗೆ 30 ದಿನ; ಹುಬ್ಬೇರಿಸಿದ ಸಿನಿಪ್ರಿಯರು
Published On - 12:49 pm, Thu, 15 July 21