
ಬೆಂಗಳೂರು, ಜುಲೈ 12: ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ‘ಜಾನಕಮ್ಮ‘ ಅವರ ನಿಧನದಿಂದಾಗಿ ಇಡೀ ಸಂಗೀತ ಲೋಕ ತೀವ್ರ ದುಃಖದಲ್ಲಿ ಮುಳುಗಿದೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 88 ವರ್ಷದ ದಂತಕಥೆ ಜಾನಕಮ್ಮ ಅವರು ಮೈಸೂರಿನಲ್ಲಿ ಶನಿವಾರ (ಜು 11) ಕೊನೆಯುಸಿರೆಳೆದಿದ್ದಾರೆ. ಈ ದುಃಖದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿಯ ಮಹಾಪೂರವೇ ಹರಿದುಬಂದಿದೆ. ವಿವಿಧ ತಲೆಮಾರಿನ ಅಭಿಮಾನಿಗಳು, ಸಂಗೀತಗಾರರು ಮತ್ತು ಗಣ್ಯರು ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಸುದ್ದಿ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ ಎಕ್ಸ್ (ಟ್ವಿಟರ್), ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಜಾನಕಮ್ಮನ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ಚಿತ್ರರಂಗದ ಸಂಗೀತ ಲೋಕವನ್ನು ಆಳಿದ ದಿವ್ಯ ಚೇತನದ ಅಗಲಿಕೆಗೆ ನೆಟ್ಟಿಗರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೊಬ್ಬರು ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಒಂದು ಅದ್ಭುತ ಯುಗ ಕೊನೆಗೊಂಡಿದೆ, ಆದರೆ ಜಾನಕಮ್ಮನ ಧ್ವನಿ ತಲೆಮಾರುಗಳವರೆಗೆ ಹೃದಯಗಳನ್ನು ಸ್ಪರ್ಶಿಸುತ್ತಲೇ ಇರುತ್ತದೆ! ಇಂದು ನಾವು ನಿಜವಾದ ದಂತಕಥೆಯನ್ನು ಕಳೆದುಕೊಂಡಿದ್ದೇವೆ” ಎಂದು ಬರೆದಿದ್ದಾರೆ.
ಅವರ ಅಪ್ರತಿಮ ಧ್ವನಿಯ, ಅಪಾರ ಸಾಧನೆಯನ್ನು ನೆಟ್ಟಿಗರು ಸ್ಮರಿಸುತ್ತಿದ್ದಾರೆ. ಮತ್ತೊಬ್ಬ ಅಭಿಮಾನಿ,”ಎಸ್. ಜಾನಕಿ ಅವರು 20 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವರ್ಷದಲ್ಲೇ (1957) 6 ವಿಭಿನ್ನ ಭಾಷೆಗಳಲ್ಲಿ ಹಾಡಿದ್ದರು. 4 ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತರಿವರು. ನಮಗೆ ಸಾವಿರಾರು ಮಧುರ ಗೀತೆಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಅಮ್ಮ” ಎಂದು ಪೋಸ್ಟ್ ಮಾಡಿ ತಮ್ಮ ದುಃಖವನ್ನು ಹೊರಹಾಕಿದ್ದಾರೆ.
80ರ ದಶಕದ ಹಳೆಯ ಹಾಡುಗಳ ಪ್ರೇಮಿಗಳಿಗೆ, ಜಾನಕಮ್ಮನ ಅಗಲಿಕೆಯು ದಿವಂಗತ ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ (ಎಸ್ಪಿಬಿ)ಮತ್ತು ಇಳಯರಾಜ ಅವರೊಂದಿಗಿನ ಅಪೂರ್ವ ಒಡನಾಟದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಅಂದಿನ ದಿನಗಳಲ್ಲಿ ಇಡೀ ಚಿತ್ರದ ಎಲ್ಲ ಹಾಡುಗಳನ್ನು ಕೇವಲ ಇವರಿಬ್ಬರ ಧ್ವನಿಯಲ್ಲೇ ರೆಕಾರ್ಡ್ ಮಾಡಲಾಗುತ್ತಿದ್ದ ಮಧುರ ದಿನಗಳನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.
ಅಂದಿನ ದಿನಗಳಲ್ಲಿ, ಬಹುತೇಕ ಸಿನಿಮಾಗಳನ್ನು ಕೇವಲ ಈ ಇಬ್ಬರು ಗಾಯಕರು ಮಾತ್ರವೇ ಆಳುತ್ತಿದ್ದರು. ಎಸ್ಪಿಬಿ ಮತ್ತು ಎಸ್ ಜಾನಕಿ. ಆದರೆ ಇಂದು ಸಂಗೀತ ಲೋಕ ತನ್ನ ಮಹಾರಾಣಿಯನ್ನು ಕಳೆದುಕೊಂಡಿದೆ ಎಂದು ತಮಿಳು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ದೇಶ-ವಿದೇಶಗಳ ಅಭಿಮಾನಿಗಳು ಭಾಷೆ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ ಜಾನಕಮ್ಮನ ಧ್ವನಿ ಹೇಗೆ ಎಲ್ಲರನ್ನೂ ತಲುಪಿತ್ತು ಎಂಬುದನ್ನು ನೆಟ್ಟಿಗರು ನೆನೆದಿದ್ದಾರೆ. ಸಣ್ಣ ಮಗುವಿನ ತೊದಲು ನುಡಿಯಿಂದ ಹಿಡಿದು, ಗಂಭೀರ ಶಾಸ್ತ್ರೀಯ ಸಂಗೀತ ಮತ್ತು ಅತ್ಯಂತ ನೋವಿನ ಭಾವನಾತ್ಮಕ ಗೀತೆಗಳವರೆಗೆ ಅವರ ಕಂಠಸಿರಿ ಸಾಟಿಯಿಲ್ಲದ್ದು. ಮೈಸೂರಿನಲ್ಲಿ ಗಾನ ಕೋಗಿಲೆಯ ಭೌತಿಕ ಧ್ವನಿ ಇನ್ನು ಮೂಗದಿದ್ದರೂ, ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಗೌರವವ, ಅಭಿಮಾನವು ಜಾನಕಮ್ಮನನ್ನು ಎಂದೆಂದಿಗೂ ಶಾಶ್ವತವಾಗಿ ಉಳಿಸುತ್ತವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:06 am, Sun, 12 July 26