
ಬಾಲಿವುಡ್ನ ಸ್ಟಾರ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ 14ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ದಂಪತಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಒಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸೈಫ್ ಅಲಿ ಖಾನ್ ತಮ್ಮ ವೈಯಕ್ತಿಕ ಜೀವನದ ಕುರಿತು ಕೆಲ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕರೀನಾ ಕಪೂರ್ ಅವರ ವಿಚಿತ್ರ ಹವ್ಯಾಸದ ಬಗ್ಗೆ ಅವರು ತಮಾಷೆಯಾಗಿ ನಗುವನ್ನು ಮೂಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕರೀನಾ ಕಪೂರ್ ತುಪ್ಪದ ಮೇಲಿರುವ ತಮ್ಮ ಅತಿಯಾದ ಪ್ರೀತಿಯ ಬಗ್ಗೆ ಮಾತನಾಡಿದರು. ಪ್ರತಿದಿನ ತಾವು ಮತ್ತು ಮಕ್ಕಳು ತಪ್ಪದೇ ತುಪ್ಪ ಸೇವಿಸುತ್ತೇವೆ ಎಂದು ಅವರು ಹೇಳಿಕೊಂಡರು. ಹಿಂದೊಮ್ಮೆ ಕೌನ್ ಬನೇಗಾ ಕರೋಡ್ಪತಿ ಶೋನಲ್ಲಿ ಸೈಫ್ಗೆ ಎರಡು ವರ್ಷಗಳ ಕಾಲ ಉಚಿತ ತುಪ್ಪ ಸಿಕ್ಕಿತ್ತು. ಅದೇ ತುಪ್ಪವನ್ನು ಈಗಲೂ ತಮ್ಮ ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ ಎಂದು ಕರೀನಾ ಸ್ಪಷ್ಟಪಡಿಸಿದರು.
ಸೈಫ್ ಅಲಿ ಖಾನ್ ತಮ್ಮ ಹೆಂಡತಿಯ ಬಗ್ಗೆ ತಮಾಷೆಯಾಗಿ ಒಂದು ರಹಸ್ಯವನ್ನು ಬಿಚ್ಚಿಟ್ಟರು. ಕರೀನಾ ಕೇವಲ ತುಪ್ಪವನ್ನು ತಿನ್ನುವುದಿಲ್ಲ ಎಂದು ಅವರು ಹೇಳಿದರು. ಪ್ರತಿದಿನ ರಾತ್ರಿ ಮಲಗುವ ಮುನ್ನ ಕರೀನಾ ತಮ್ಮ ಪಾದಗಳಿಗೆ ತುಪ್ಪವನ್ನು ಹಚ್ಚಿಕೊಳ್ಳುತ್ತಾರೆ ಎಂದು ಸೈಫ್ ವಿವರಿಸಿದರು. ಇದರಿಂದ ಉತ್ತಮ ನಿದ್ರೆ ಬರುತ್ತದೆ ಎಂದು ಕರೀನಾ ನಗುತ್ತಲೇ ಸಮರ್ಥನೆ ಮಾಡಿಕೊಂಡರು.
ಹೆಂಡತಿಯ ಈ ವಿಚಿತ್ರ ಹವ್ಯಾಸದ ಬಗ್ಗೆ ಸೈಫ್ ತಮಾಷೆ ಮಾಡಿದರು. ನಮ್ಮ ಮಲಗುವ ಕೋಣೆಯು ಪ್ರತಿದಿನ ರಾತ್ರಿ ಢಾಬಾದಂತೆ ಪರಿಮಳ ಬೀರುತ್ತದೆ ಎಂದು ಅವರು ನಕ್ಕರು. ಸೈಫ್ ಅವರ ಈ ತಮಾಷೆಯ ಮಾತನ್ನು ಕೇಳಿ ನೆರೆದಿದ್ದ ಎಲ್ಲರೂ ಜೋರಾಗಿ ನಕ್ಕರು. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: 15 ವರ್ಷಗಳ ಬಳಿಕ ಮತ್ತೆ ಶಾರುಖ್ ಖಾನ್ ಜೊತೆ ನಟಿಸುತ್ತಿದ್ದಾರೆ ಕರೀನಾ ಕಪೂರ್
ಇದೇ ವೇಳೆ ಕರೀನಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಳೆಯ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮದುವೆಗೂ ಮುಂಚಿನ ದಿನಗಳು ಮತ್ತು ಮಕ್ಕಳ ಜೊತೆಗಿನ ಸುಂದರ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ಜೋಡಿಗೆ ಚಿತ್ರರಂಗದ ಅನೇಕ ನಟ ನಟಿಯರು ವಾರ್ಷಿಕೋತ್ಸವದ ಶುಭ ಹಾರೈಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.