ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದಲ್ಲಿ ದುರಂತ ನಡೆದಿದೆ. ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ (Salaar Movie) ಬಿಡುಗಡೆ ವೇಳೆ ವಿದ್ಯುತ್ ಶಾಕ್ ತಗುಲಿ ಅಭಿಮಾನಿಯೊಬ್ಬರು ಸಾವನ್ನಪ್ಪಿದ್ದಾರೆ. ಗುರುವಾರ (ಡಿ.21) ಪಟ್ಟಣದ ರಂಗ ಥಿಯೇಟರ್ ಮುಂಭಾಗದ ಮನೆಯೊಂದರಲ್ಲಿ ಫ್ಲೆಕ್ಸ್ ತೊಳೆಯುತ್ತಿದ್ದಾಗ ನಾಯಕ ಪ್ರಭಾಸ್ (Prabhas) ಅಭಿಮಾನಿ ಬಾಲರಾಜು (27) ವಿದ್ಯುತ್ ಸ್ಪರ್ಶಿಸಿ (Electrocution) ಮೃತಪಟ್ಟಿದ್ದಾರೆ. ಬಾಲರಾಜು ಅವರು ತಮ್ಮ ನೆಚ್ಚಿನ ನಟ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರ ನೋಡಲು ಕಾದಿದ್ದರು. ಅವರ ಸ್ನೇಹಿತರು ಫ್ಲೆಕ್ಸ್ ಫ್ರೇಮ್ ಮಾಡಿ ತೊಳೆದಾಗ ಫ್ರೇಮ್ನ ಕಬ್ಬಿಣದ ರಾಡ್ ಮನೆಯ ವಿದ್ಯುತ್ ವೈರ್ಗಳಿಗೆ ತಗುಲಿದಾಗ ಅವಘಡ ಸಂಭವಿಸಿದೆ. ಇದರಲ್ಲಿ ಬಾಲರಾಜು ಸಾವನ್ನಪ್ಪಿದ್ದಾರೆ. ಗಜೇಂದ್ರ ಎಂಬ ಯುವಕ ಗಾಯಗೊಂಡಿದ್ದಾನೆ.
ಇನ್ನು ನಾಲ್ವರು ಯುವಕರು ಅಪಘಾತದಿಂದ ಪಾರಾಗಿದ್ದಾರೆ. ವಿದ್ಯುತ್ ತಂತಿಗಳು ಕಡಿಮೆ ಎತ್ತರದಲ್ಲಿ ಇದ್ದಿದ್ದರಿಂದ ಅವಘಡ ಸಂಭವಿಸಿದೆ ಎಂದು ಬಾಲರಾಜು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಬಾಲರಾಜು ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಕನಗಾನಪಲ್ಲಿ ಮಂಡಲದ ಮಾಮಿಲ್ಲಪಲ್ಲಿಯಲ್ಲಿ ಕೆಲ ದಿನಗಳಿಂದ ವಾಸವಾಗಿದ್ದರು. ನಟ ಪ್ರಭಾಸ್ ಅವರ ದೊಡ್ಡ ಅಭಿಮಾನಿ ಈ ಬಾಲರಾಜು. ಮೃತರು ಪತ್ನಿ ಸಿರಿಶಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಧರ್ಮವರಂ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ‘ಪ್ರಭಾಸ್ ಮಾಸ್ ಕಂಬ್ಯಾಕ್’; ‘ಸಲಾರ್’ ನೋಡಿ ಟ್ವಿಟರ್ನಲ್ಲಿ ವಿಮರ್ಶೆ ತಿಳಿಸಿದ ಫ್ಯಾನ್ಸ್
ಬಾಲರಾಜು ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ನಿನ್ನೆ ರಾತ್ರಿ ಮೃತನ ಸಂಬಂಧಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ವಿದ್ಯುತ್ ವೈರ್ಗಳು ಕಡಿಮೆ ಎತ್ತರದಲ್ಲಿ ಇದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಬಾಲರಾಜು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಅಲ್ಲಿಂದ ಕಳುಹಿಸಿದರು. ಬಾಲರಾಜು ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:55 am, Fri, 22 December 23