ಸ್ಯಾಂಡಲ್ವುಡ್ ಪಾಲಿಗೆ ಸೋಮವಾರ (ಆ.9) ಕಹಿ ಸುದ್ದಿ ಕೇಳಿಬಂದಿದೆ. ರಚಿತಾ ರಾಮ್ (Rachita Ram) ಮತ್ತು ಅಜಯ್ ರಾವ್ (Ajay Rao) ನಟನೆಯ ‘ಲವ್ ಯೂ ರಚ್ಚು’ ಸಿನಿಮಾದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು ಫೈಟರ್ ವಿವೇಕ್ ಎಂಬುವವರು ನಿಧನರಾಗಿದ್ದಾರೆ. ವಿದ್ಯುತ್ ತಂತಿ ತಗುಲಿ ಅವರು ಮೃತರಾಗಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ‘ಲವ್ ಯೂ ರಚ್ಚು’ (Love You Racchu) ಚಿತ್ರದ ನಿರ್ದೇಶಕ ಶಂಕರ್, ಸಾಹಸ ನಿರ್ದೇಶಕ ವಿನೋದ್ ಮತ್ತು ಜೆಸಿಬಿ ಡ್ರೈವರ್ ಒಬ್ಬರನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ. ದುರ್ಘಟನೆಯಲ್ಲಿ ರಂಜಿತ್ ಎಂಬ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
‘ಲವ್ ಯೂ ರಚ್ಚು’ ಸಿನಿಮಾದಲ್ಲಿ ಅಜಯ್ ರಾವ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ರಚಿತಾ ರಾಮ್ ಈ ಚಿತ್ರದ ನಾಯಕಿ. ಶಂಕರ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಗುರು ದೇಶಪಾಂಡೆ ಚಿತ್ರದ ನಿರ್ಮಾಪಕ. ಮಣಿಕಾಂತ್ ಕದ್ರಿ ಅವರು ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ರೋಪ್ ಎಳೆಯುವಾಗ ಫೈಟರ್ ವಿವೇಕ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯುತ್ ತಂತಿಗೆ ರೋಪ್ ಸ್ಪರ್ಶಿಸಿದ್ದು ವಿವೇಕ್ ಸಾವಿಗೆ ಕಾರಣ ಎನ್ನಲಾಗಿದೆ.
ವಿವೇಕ್ ನಿಧನಕ್ಕೆ ಚಿತ್ರದ ನಾಯಕ ಅಜಯ್ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ವಹಿಸದೇ, ನಿರ್ಲಕ್ಷ್ಯ ತೋರಿದ್ದೇ ಈ ದುರಂತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ‘ಮೆಟಲ್ ರೋಪ್ ಬಳಸಿದ್ದರಿಂದ ದುರಂತ ಸಂಭವಿಸಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಾನು ಇರಲಿಲ್ಲ. ಜಾಕೇಟ್ ಹಾಕಿದ್ದವನಿಗೂ ಶಾಕ್ ಹೊಡೆದಿದೆ. ಮುಂಜಾಗ್ರತ ಕ್ರಮ ತೆಗೆದುಕೊಳ್ಳದ್ದಕ್ಕೆ ದುರಂತ ನಡೆದಿದೆ. ಈ ದೃಶ್ಯದ ಚಿತ್ರೀಕರಣದಲ್ಲಿ ನಾನಿದ್ರೆ ಮಾಡುತ್ತಿರಲಿಲ್ಲ. ನಾನೇನಾದ್ರೂ ಹೇಳಲು ಹೋದ್ರೆ ಮೂಗು ತೂರಿಸ್ತಾರೆ ಅಂತಾರೆ. ನಾನು ನಿರ್ದೇಶಕರ ಬಳಿ ಮಾತನಾಡುವುದಕ್ಕೆ ಆಗಿಲ್ಲ. ಘಟನಾ ಸ್ಥಳದಿಂದ ನಾನು 200 ಮೀಟರ್ ದೂರ ಇದ್ದೆ. ಬಳಿಕ ನಮ್ಮ ಹುಡುಗರು ಬಂದು ಮಾಹಿತಿ ನೀಡಿದರು. ನನಗೂ ಕೂಡ ಸರಿಯಾದ ಮಾಹಿತಿ ಸಿಕ್ಕಿಲ್ಲ’ ಎಂದು ಅಜಯ್ ರಾವ್ ಹೇಳಿದ್ದಾರೆ.
‘ಇದು ತುಂಬಾ ಬೇಸರವಾದ ವಿಷಯ. ವಿವೇಕ್ಗೆ ನ್ಯಾಯ ಸಿಗುವವರೆಗೂ ಶೂಟಿಂಗ್ಗೆ ಬರಲ್ಲ. ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೇನೆ. ನನಗೂ ಫೈಟರ್ ವಿವೇಕ್ಗೂ ಸಂಪರ್ಕ ಇರಲಿಲ್ಲ. ಪ್ಯಾಚ್ವರ್ಕ್ ಸೀನ್ಗಳನ್ನ ಶೂಟ್ ಮಾಡುತ್ತಿದ್ದೆವು. ಚಿತ್ರದ ಬಗ್ಗೆ ಜಾಸ್ತಿ ಕೇಳಿದರೆ ನಾವು ಕೆಟ್ಟವರಾಗಿಬಿಡುತ್ತೇವೆ’ ಎಂದು ಅಜಯ್ ರಾವ್ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ:
Fighter Vivek Death: ರಚಿತಾ ರಾಮ್ ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು; ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ
Published On - 4:12 pm, Mon, 9 August 21