ನವೆಂಬರ್ 1 ಹತ್ತಿರ ಬಂದಿದೆ. ಕನ್ನಡ ರಾಜ್ಯೋತ್ಸವ ಆಚರಿಸಲು ಸಿದ್ಧತೆ ನಡೆದಿದೆ. ಕನ್ನಡ ರಾಜ್ಯೋತ್ಸವ ಎಂದಾಗ ನೆನಪಿಗೆ ಬರೋದು ಡಾ. ರಾಜ್ಕುಮಾರ್ (Dr Rajkumar). ಈಗ ರಾಜ್ಯೋತ್ಸವದ ಸಂದರ್ಭದಲ್ಲೇ ರಾಜ್ಕುಮಾರ್ ಪ್ರತಿಮೆ ವಿವಾದ ಮುನ್ನೆಲೆಗೆ ಬಂದಿದೆ. ಅಣ್ಣಾವ್ರ ಪ್ರತಿಮೆ ನಿರ್ಮಾಣಕ್ಕೆ ನೀಡಿದ ಜಾಗದಲ್ಲಿ ಬೇರೆ ಕಾಮಗಾರಿ ನಡೆಸಲು ಪ್ಲಾನ್ ನಡೆದಿದೆ ಎನ್ನಲಾಗುತ್ತಿದೆ. ಬಿಬಿಎಂಪಿಯ ಈ ನಡೆ ರಾಜ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ.
ಬೆಂಗಳೂರಿನ ಉಪ್ಪಾರ ಪೇಟೆ ಸ್ಟೇಶನ್ ಬಳಿಯ ಶಾಂತಲಾ ಸಿಲ್ಕ್ ಸರ್ಕಲ್ ಬಳಿ ರಾಜ್ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು. ಕೊರೊನಾ ಕಾರಣದಿಂದ ಕಾಮಗಾರಿ ಆರಂಭ ಆಗೋದು ವಿಳಂಬ ಆಯಿತು. ಈ ಜಾಗದಲ್ಲಿ ಈಗ ವಾಟರ್ ಫೌಂಟೇನ್ ನಿರ್ಮಾಣ ಆಗ್ತಿದೆ ಅನ್ನೋ ಮಾಹತಿ ಸಿಕ್ಕಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ.
ಈ ಸ್ಥಳದಲ್ಲಿ 1983ರಂದು ಕನ್ನಡ ಬಾವುಟ ನೆಟ್ಟು ಧ್ವಜರೋಹಣ ಮಾಡಲಾಗಿತ್ತು. ಗಾಂಧೀನಗರದಲ್ಲಿ ಮೊದಲು ಕನ್ನಡದ ಕಂಬ ನೆಟ್ಟಿದ್ದಜಾಗ ಇದು. ಹೀಗಾಗಿ ಅಣ್ಣಾವ್ರ ಪ್ರತಿಮೆ ಇಡೋಕೆ ಅವಕಾಶ ನೀಡಬೇಕು ಎಂಬುದು ಅಭಿಮಾನಿಗಳ ಕೋರಿಕೆ ಆಗಿದೆ. ಸದ್ಯ ರಾಜ್ಕುಮಾರ್ ಅಭಿಮಾನಿಗಳು ಬಿಬಿಎಂಪಿ ಕಚೇರಿಗೆ ತೆರಳುತ್ತಿದ್ದಾರೆ. ಆಯುಕ್ತರಿಗೆ ಅವರು ವಿಶೇಷ ಮನವಿ ಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಚಂದನವನದ ಸೆಲೆಬ್ರಿಟಿಗಳ ಹೃದಯದಲ್ಲಿ ಪುನೀತ್ ರಾಜ್ಕುಮಾರ್ ಎಂದೆಂದಿಗೂ ಅಮರ
ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು. ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಭಾಷೆ-ನೆಲದ ವಿಚಾರ ಬಂದರೆ ಅವರು ಧ್ವನಿ ಎತ್ತುತ್ತಿದ್ದರು. ಈ ಕಾರಣದಿಂದಲೇ ಕನ್ನಡಕ್ಕೂ, ರಾಜ್ಕುಮಾರ್ಗೂ ವಿಶೇಷ ನಂಟಿದೆ. ‘ಹುಟ್ಟಿದರೇ ಕನ್ನಡ್ ನಾಡಲ್ಲಿ ಹುಟ್ಟಬೇಕು..’ ಹಾಡು ರಾಜ್ ಕಂಠದಲ್ಲಿ ಮೂಡಿ ಬಂದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:58 pm, Mon, 30 October 23