
‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಬಿಡುಗಡೆ ಆಗಿ ಈಗಾಗಲೇ ಮೂರು ದಿನಗಳಾಗಿವೆ. ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮಾಡುತ್ತಿದೆ. ಸಿನಿಮಾಕ್ಕೆ ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ತೆಲುಗು ರಾಜ್ಯಗಳು, ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತ ಪ್ರದೇಶಗಳಲ್ಲಿಯೂ ಸಹ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಸಿನಿಮಾ ನೋಡಿ ಹೊರಬಂದ ಕೆಲವರಂತೂ ಶರ್ಟ್ ಕಿತ್ತುಹಾಕಿ ಭಾವಪರವಶರಾಗಿ ರಿಷಬ್ ಅವರನ್ನು ಹೊಗಳಿದ ಘಟನೆಗಳು ನಡೆದಿವೆ. ಬೆಂಗಳೂರಿನ ಚಿತ್ರಮಂದಿರದ ಹೊರಗೆ ಒಬ್ಬ ವ್ಯಕ್ತಿ ದೇವರು ಬಂದ ಹಾಗೆ ಆಡಿ ಹುಚ್ಚಾಟ ತೋರಿದ್ದ, ಈಗ ದೂರದ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ಪಂಜುರ್ಲಿಯಂತೆ ವೇಷ ಧರಿಸಿ ಚಿತ್ರಮಂದಿರದ ಒಳಗೆ ನುಗ್ಗಿದ್ದಾನೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಕರ್ನಾಟಕದ ಜೊತೆಗೆ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ತಮಿಳುನಾಡಿನಲ್ಲಂತೂ ಸಿನಿಮಾ ಅನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾಕ್ಕೂ ಸಹ ತಮಿಳುನಾಡಿನ ಪ್ರೇಕ್ಷಕರು ಇದೇ ರೀತಿ ಪ್ರೀತಿ ತೋರಿಸಿದ್ದರು. ಈಗಂತೂ ವ್ಯಕ್ತಿಯೊಬ್ಬ ಪಂಜುರ್ಲಿಯಂತೆ ವೇಷ ಧರಿಸಿ, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರಕ್ಕೆ ನುಗ್ಗಿದ್ದಾನೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
🚨Kantara magic comes alive in Tamil Nadu!
At a Dindigul theatre, a fan showed up as a Daiva after the movie — turning the post-screening atmosphere into a real-life celebration! #KantaraChapter1
pic.twitter.com/IZL37rpry2— Backchod Indian (@IndianBackchod) October 5, 2025
ತಮಿಳುನಾಡಿನ ದಿಂಡಿಗಲ್ನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದ ಒಳಕ್ಕೆ ವ್ಯಕ್ತಿಯೊಬ್ಬ ಪಂಜುರ್ಲಿಯಂತೆ ವೇಷ ಧರಿಸಿ ನುಗ್ಗಿದ್ದಾನೆ. ಸಿನಿಮಾ ಪ್ರದರ್ಶನ ಆಗುವ ಮುಂಚೆ ಈ ವ್ಯಕ್ತಿ ನುಗ್ಗಿದ್ದು ಪ್ರೇಕ್ಷಕರೆಲ್ಲ ವ್ಯಕ್ತಿಯ ಫೋಟೊ, ವಿಡಿಯೋ ಮಾಡಿಕೊಂಡಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋ ನೋಡಿದರೆ ಚಿತ್ರಮಂದಿರದವರೇ ಆಯೋಜಿಸಿರುವ ‘ಶೋ’ ರೀತಿ ಅದು ಕಾಣುತ್ತಿದೆ. ಏಕೆಂದರೆ ವ್ಯಕ್ತಿ ಚಿತ್ರಮಂದಿರಕ್ಕೆ ಎಂಟ್ರಿ ನೀಡುತ್ತಿದ್ದಂತೆ ಚಿತ್ರಮಂದಿರದವರೇ ‘ಕಾಂತಾರ’ ಸಿನಿಮಾದ ಥೀಮ್ ಸಂಗೀತವನ್ನು ಹಾಕಿರುವುದು ವಿಡಿಯೋದಿಂದ ಗೊತ್ತಾಗುತ್ತಿದೆ.
ಇದನ್ನೂ ಓದಿ:‘ರಿಷಬ್ ಶೆಟ್ಟಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಬೇಕು’: ಕಾಂತಾರ ಪ್ರೇಕ್ಷಕರ ಭಾವುಕ ಮಾತು
ಈ ಹಿಂದೆ ‘ಕಾಂತಾರ’ ಸಿನಿಮಾ ಬಿಡುಗಡೆ ಆಗಿ ಹಿಟ್ ಆದ ಸಂದರ್ಭದಲ್ಲಿ ಟಿವಿ ಶೋಗಳಲ್ಲಿ, ಇನ್ನಿತರೆ ಕಡೆಗಳಲ್ಲಿ ಗುಳಿಗ ದೈವವನ್ನು, ಪಂಜುರ್ಲಿಯನ್ನು ಅನುಕರಣೆ ಮಾಡುವ ಟ್ರೆಂಡ್ ಶುರುವಾಗಿತ್ತು. ಆಗ ರಿಷಬ್ ಶೆಟ್ಟಿ, ಯಾರೂ ಸಹ ದೈವವನ್ನು ಅನುಕರಣೆ ಮಾಡಬಾರದು ಎಂದಿದ್ದರು. ಆದರೆ ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಅದೇ ಹುಚ್ಚಾಟ ಮತ್ತೆ ಶುರುವಾಗಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಿಡುಗಡೆ ಸಮಯದಲ್ಲಿ ಬೆಂಗಳೂರಿನ ಚಿತ್ರಮಂದಿರದ ಹೊರಗೆ ವ್ಯಕ್ತಿಯೊಬ್ಬ ದೇವರು ಬಂದಂತೆ ಆಡಿ ಹುಚ್ಚಾಟ ಮೆರೆದಿದ್ದ, ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡದಿದ್ದರೆ ಶಾಪ ನೀಡುವುದಾಗಿ ‘ಬೆದರಿಕೆ’ ಬೇರೆ ಹಾಕಿದ್ದ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:07 pm, Sun, 5 October 25