ಚೇತನ್​ ಕೇವಲ 1 ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದೇಕೆ? ಶಿವರಾಮ್​ ಹೆಬ್ಬಾರ್​ ಜತೆಗಿನ ಜಟಾಪಟಿ ಬಗ್ಗೆ ನಟನ ಪ್ರತಿಕ್ರಿಯೆ

| Updated By: ರಾಜೇಶ್ ದುಗ್ಗುಮನೆ

Updated on: Jun 27, 2021 | 4:14 PM

Shivaram Hebbar: ಶಿವರಾಮ್​ ಹೆಬ್ಬಾರ್​ ವಿರುದ್ಧ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿದ್ದು ಯಾಕೆಂದರೆ, ಇದು ದುಡ್ಡಿಗಾಗಿ ಹಾಕಿರುವುದಲ್ಲ. ಲಕ್ಷ, ಕೋಟಿ ಹಾಕುವ ಉದ್ದೇಶ ಇಲ್ಲ ಎಂದು ಚೇತನ್​ ಪ್ರತಿಕ್ರಿಯಿಸಿದ್ದಾರೆ.

ಚೇತನ್​ ಕೇವಲ 1 ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದೇಕೆ? ಶಿವರಾಮ್​ ಹೆಬ್ಬಾರ್​ ಜತೆಗಿನ ಜಟಾಪಟಿ ಬಗ್ಗೆ ನಟನ ಪ್ರತಿಕ್ರಿಯೆ
ನಟ ಚೇತನ್​ ಕುಮಾರ್
Follow us on

ನಟ ಚೇತನ್​ ಅವರು ಬ್ರಾಹ್ಮಣ್ಯದ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದನ್ನು ಖಂಡಿಸಿ, ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​ ಟ್ವೀಟ್​ ಮಾಡಿದ್ದರು. ಆ ಟ್ವೀಟ್​ನಿಂದ ತಮ್ಮ ತೇಜೋವಧೆ ಆಗಿದೆ ಎಂದು ಆರೋಪಿಸಿ ಸಚಿವರ ವಿರುದ್ಧ ಚೇತನ್​ 1 ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಷ್ಟಕ್ಕೂ ಚೇತನ್​ 1 ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದಾದರೂ ಯಾಕೆ ಎಂಬ ಅನುಮಾನ ಎಲ್ಲರಲ್ಲೂ ಮೂಡಿತ್ತು. ಆ ಬಗ್ಗೆ ಅವರೀಗ ಪ್ರತಿಕ್ರಿಯೆ ನೀಡಿದ್ದಾರೆ.

‘ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿದ್ದು ಯಾಕೆಂದರೆ, ಇದು ದುಡ್ಡಿಗಾಗಿ ಹಾಕಿರುವುದಲ್ಲ. ಲಕ್ಷ, ಕೋಟಿ ಹಾಕುವ ಉದ್ದೇಶ ಇಲ್ಲ. ಒಂದು ಮೊತ್ತ ಹಾಕಬೇಕು. ಅದರಲ್ಲಿ ಅತೀ ಕಡಿಮೆ ಎಂದರೆ ಒಂದು ರೂಪಾಯಿ. ಅದನ್ನು ಸಾಂಕೇತಿಕವಾಗಿ ಹಾಕಿದ್ದೇನೆ. ಅವರು ಕ್ಷಮೆ ಕೇಳಬೇಕು. ಗಂಜಿ ಕಾಸು, ಕಂಟಕಕರ ಅಂತ ಮಾತನಾಡಿರುವುದು ತಪ್ಪು’ ಎಂದು ಚೇತನ್​ ಹೇಳಿದ್ದಾರೆ.

‘ನಾವು ಪ್ರಜಾಪ್ರಭುತ್ವವನ್ನು ನಂಬುವವರು. ಚರ್ಚೆಯನ್ನು ನಂಬುವವರು. ನೀವು ಚರ್ಚೆ ಮಾಡಿ. ನಿಮ್ಮಂತೆ ನಮಗೂ ಮಾತನಾಡುವ ಹಕ್ಕಿದೆ. ಜನಸೇವಕರಾದ​ ನಿಮ್ಮಂದ ನಾವು ಏನಾದರೂ ಕಲಿಯಲು ಸಿದ್ಧರಿದ್ದೇವೆ. ನಮ್ಮಿಂದ ಕಲಿಯುವುದು ಇದ್ದರೆ ನೀವು ಅದನ್ನು ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಅಧಿಕೃತ ಟ್ವಿಟರ್​ ಖಾತೆ ಮೂಲಕ ಈ ರೀತಿ ಮಾತನಾಡುವುದನ್ನು ನಾನು ಒಪ್ಪುವುದಿಲ್ಲ. ಅದಕ್ಕೆ ನಾನು ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಕ್ರಿಮಿನಲ್​ ಹಾಕಿಲ್ಲ, ಸಿವಿಲ್​ ಹಾಕಿದ್ದೇನೆ. ಅವರು ಕ್ಷಮೆ ಕೇಳಲಿ’ ಎಂದು ಚೇತನ್​ ಹೇಳಿದ್ದಾರೆ.

1 ರೂ. ಮಾನನಷ್ಟ ಪರಿಹಾರ ನೀಡಬೇಕು ಮತ್ತು ಬೇಷರತ್​ ಕ್ಷಮೆ ಯಾಚಿಸಬೇಕು ಎಂದು ಚೇತನ್​ ಹೂಡಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ಸಿಟಿ ಸಿವಿಲ್​ ಸೆಷನ್ಸ್​ ಕೋರ್ಟ್​ನಿಂದ ಸಚಿವ ಶಿವರಾಮ್​ ಹೆಬ್ಬಾರ್​ಗೆ ನೋಟಿಸ್​ ಜಾರಿ ಮಾಡಲಾಗಿದೆ. ಜು.14ಕ್ಕೆ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ:

ಚೇತನ್​ ಗಡಿಪಾರಿಗೆ ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯ; ನಟನ ಪ್ರತಿಕ್ರಿಯೆ ಏನು?

ನಟ ಚೇತನ್​ ಈವರೆಗೆ ಒಮ್ಮೆಯೂ ವೋಟ್​ ಹಾಕಿಲ್ಲ; ಅದಕ್ಕೆ ಇದೆ ಒಂದು ವಿಶೇಷ ಕಾರಣ